ಬೆಂಗಳೂರು:ವಿದೇಶೀ ವಿನಿಮಯ ನಿರ್ವಹಣಾ ಕಾಯಿದೆ (ಎಫ್‌ಇಎಂಎ) ಉಲ್ಲಂಘಿಸಿ ಅಕ್ರಮವಾಗಿ ಹೊರ ರಾಷ್ಟ್ರಗಳಲ್ಲಿ ವಹಿವಾಟು ನಡೆಸಿರುವ ಆರೋಪದ ಮೇಲೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿ ದಾಖಲೆಗಳನ್ನು ವಶ ಪಡಿಸಿಕೊಂಡಿದೆ.
ಸತೀಶ್ ಅಷ್ಟೇ ಅಲ್ಲದೆ, ಅವರ ಪುತ್ರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ, ಸಹೋದರಿ ಲಕ್ಷ್ಮೀ ಅವರಿಗೆ ಸೇರಿದ ಬೆಂಗಳೂರು, ಬೆಳಗಾವಿ, ಗೋವಾ, ಮಹಾರಾಷ್ಟ್ರದ 25 ಕಡೆಗಳಲ್ಲಿ ಇ.ಡಿ. ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದೆ.
ವಿದೇಶಗಳಲ್ಲಿ ಅಕ್ರಮ ಹೂಡಿಕೆ
ದಕ್ಷಿಣ ಆಫ್ರಿಕಾದ ರುವಾಂಡಾ ಸೇರಿದಂತೆ ವಿವಿಧ ದೇಶಗಳಲ್ಲಿ ಅಕ್ರಮ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಆಧರಿಸಿ ಇ.ಡಿ. ಕಾರ್ಯಾಚರಣೆ ನಡೆಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ವ್ಯವಹಾರದಲ್ಲಿ ಭಾರೀ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ, ಇದಕ್ಕಾಗಿ ಸತೀಶ್ ತಮ್ಮ ಪುತ್ರ, ಪುತ್ರಿ ಹಾಗೂ ಸಹೋದರಿ ಅವರುಗಳನ್ನು ಕಂಪನಿಗಳ ನಿರ್ದೇಶಕರನ್ನಾಗಿ ಮಾಡಿಕೊಂಡು ಕೋಟ್ಯಂತರ ರೂ. ಹೂಡಿಕೆ ಮತ್ತು ವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿದೆ.
ಅಕ್ರಮ ಮಾರ್ಗಗಳ ಮೂಲಕ ವಿದೇಶಕ್ಕೆ ಹಣ ವರ್ಗಾವಣೆ ಮಾಡಿ ಕುಟುಂಬದವರ ಹೆಸರಿನಲ್ಲಿ ಆಫ್ರಿಕಾದ ವಿವಿಧ ರಾಷ್ಟ್ರಗಳಲ್ಲಿ ಕಂಪನಿಗಳನ್ನು ತೆರೆದಿದ್ದಾರೆ.
ದಾಖಲೆ ಪತ್ರಗಳ ವಶ
ಇತ್ತೀಚೆಗಷ್ಟೇ ಅವರ ಸಹೋದರಿಯ ಪತಿ ಅಬಕಾರಿ ಜಂಟಿ ಆಯುಕ್ತರಾಗಿದ್ದ ವೈ.ಮಂಜುನಾಥ್ ಅವರ ನಿವಾಸ, ಕಚೇರಿಗಳ ಮೇಲೂ ಇ.ಡಿ. ದಾಳಿ ನಡೆಸಿ ಕೋಟ್ಯಂತರ ರೂ. ನಗದು ಹಾಗೂ ದಾಖಲೆ ಪತ್ರಗಳನ್ನು ವಶ ಪಡಿಸಿಕೊಂಡಿದೆ.
ದಾಳಿಯಲ್ಲಿ ದೊರೆತ ದಾಖಲೆಗಳ ಪರಿಶೀಲನೆ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಅಕ್ರಮವಾಗಿ ಬಂಡವಾಳ ಹೂಡಿಕೆ ಮಾಡಿರುವ ಮಾಹಿತಿ ಆಧರಿಸಿ ಸತೀಶ್ ಕುಂಟುಬದವರ ವಿರುದ್ಧ ತನಿಖೆ ಕೈಗೊಂಡಿದೆ.
ದಾಳಿ ಬಗ್ಗೆ ಇ.ಡಿ. ಯಾವುದೇ ಮಾಹಿತಿ ಹೊರಗೆಡವಿಲ್ಲ, ಫೆಮಾ ಉಲ್ಲಂಘಿಸಿ ವಿದೇಶಿ ಕರೆನ್ಸಿ ವಹಿವಾಟುಗಳು ಹಾಗೂ ದೇಶದ ಗಡಿಯಾಚೆ ಹೂಡಿಕೆ ಮಾಡಿರುವ ಆರೋಪಗಳು ಕೇಳಿಬಂದಿವೆ.
ಸಂಶಯಾಸ್ಪದ ವಹಿವಾಟು
ಸತೀಶ್ ಸಂಸ್ಥೆಗಳು ಬ್ಯಾಂಕ್‌ಗಳಲ್ಲಿ ಸಂಶಯಾಸ್ಪದ ರೀತಿಯಲ್ಲಿ ವಹಿವಾಟು ಮಾಡಿರುವುದನ್ನು ಪತ್ತೆ ಹಚ್ಚಿದ ಇ.ಡಿ. ಅಕ್ರಮ ಬಯಲು ಮಾಡಲು ದಾಳಿ ನಡೆಸಿದೆ ಎನ್ನಲಾಗಿದೆ.
ಫೆಮಾ ಉಲ್ಲಂಘನೆ ಅಥವಾ ತನಿಖಾ ಸಮಯದಲ್ಲಿ ದೊರೆತ ಹಣ ಕೇವಲ ವಿದೇಶಿ ವಿನಿಮಯ ಉಲ್ಲಂಘನೆ ಅಲ್ಲ, ಬದಲಿಗೆ ಇದು ಭ್ರಷ್ಟಾಚಾರ, ವಂಚನೆ, ಡ್ರಗ್ಸ್ ಅಥವಾ ದೇಶ ದ್ರೋಹದ ಚಟುವಟಿಕೆ ಮೂಲಕ ಕಪ್ಪು ಹಣ ವರ್ಗಾವಣೆ ನಡೆದಿದೆಯೇ ಎಂಬ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ಸಂಬಂಧ ಯಾವುದೇ ಸ್ಪಷ್ಟ ಮಾಹಿತಿ ಮತ್ತು ದಾಖಲೆ ದೊರೆತರೆ, ಆರೋಪಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲು ಕಾಯಿದೆಯಲ್ಲಿ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.


