ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಸೂಚನೆ
ಬೆಂಗಳೂರು:ಮುಂಗಾರು ವೈಫಲ್ಯದಿಂದ ರಾಜ್ಯಾದ್ಯಂತ ಬರ ಘೋಷಣೆಗೆ ಸರ್ಕಾರ ಒಂದೆಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ಪ್ರತಿನಿತ್ಯ 6,000 ಕ್ಯೂಸೆಕ್ ನೀರನ್ನು ಮುಂದಿನ ೧೫ ದಿನ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಸೂಚಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದಂತೆ ತಮಿಳುನಾಡಿಗೆ ಒಟ್ಟಾರೆ 7.8 ಟಿಎಂಸಿ ನೀರು ಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರಿಗೆ ಬರೆ ಎಳೆದಿದೆ
ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಕೊರತೆ ಇದ್ದು, ರಾಜ್ಯದ 4 ಜಲಾಶಯಗಳ ಒಳಹರಿವಿನ ಪ್ರಮಾಣ ಕುಸಿತಗೊಂಡಿದ್ದರೂ ನೀರು ನಿಯಂತ್ರಣ ಸಮಿತಿ ರಾಜ್ಯದ ಜನತೆ ಮತ್ತು ರೈತರಿಗೆ ಬರೆ ಎಳೆದಿದೆ.
ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಬುಧವಾರವೇ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶ ಅಸಂಬದ್ಧವಾಗಿದ್ದು, ಅತ್ಯಂತ ನೋವು ಹಾಗೂ ಬೇಸರ ತಂದಿದೆ ಎಂದಿದ್ದಾರೆ.
ಕುಡಿಯಲು ಮಾತ್ರ ನೀರು
ನಿಯಂತ್ರಣ ಸಮಿತಿ ಸಭೆಯಲ್ಲಿ ನಮ್ಮ ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಪ್ರಬಲವಾಗಿ ಮಂಡಿಸಿದ್ದಾರೆ, ಅಲ್ಲದೆ, ನಮ್ಮ ಜಲಾಶಯಗಳ ಅಣೆಕಟ್ಟೆಗಳಲ್ಲಿ ಸಂಗ್ರಹವಾಗಿರುವ ನೀರು ಮುಂದಿನ ದಿನಗಳಲ್ಲಿ ಕುಡಿಯಲು ಮಾತ್ರ ಕಾದಿರಿಸಬೇಕಾಗುತ್ತದೆ.
ಮಳೆ ಕೊರತೆಯಿಂದ ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ ಎಂಬುದಾಗಿ ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದ್ದರೂ ನೀರು ಬಿಡುವಂತೆ ಆದೇಶಿಸಿರುವುದು ರಾಜ್ಯದ ಜನತೆಗೆ ಬರೆ ಎಳೆದಂತಾಗಿದೆ.
ತಮಿಳುನಾಡು ಪ್ರತಿನಿತ್ಯ 17,000 ಕ್ಯೂಸೆಕ್ ನೀರು ಹರಿಸುವಂತೆ ಬೇಡಿಕೆ ಇಟ್ಟಿತ್ತು, ವಾದ-ಪ್ರತಿವಾದ ಆಲಿಸಿದ ಸಮಿತಿ ಈ ತೀರ್ಮಾನ ಕೈಗೊಂಡಿದೆ.
ಮೂರು ತಿಂಗಳಿಂದ ನೀರು
ಕಳೆದ ಎರಡು-ಮೂರು ತಿಂಗಳಿಂದ ನಿಯಂತ್ರಣ ಸಮಿತಿ ಹಂತ ಹಂತವಾಗಿ ತಮಿಳುನಾಡಿಗೆ ನೀರನ್ನು ಕರ್ನಾಟಕದಿಂದ ಹರಿಸುತ್ತಲೇ ಬಂದಿದೆ.
ಸಮಿತಿ ಕೈಗೊಳ್ಳುತ್ತಿರುವ ತೀರ್ಮಾನದಿಂದ ರಾಜ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಕಂಡಬರುತ್ತಿವೆ ಎಂದರು.
ದೆಹಲಿಯಲ್ಲಿ ಕುಳಿತು ಆದೇಶ
ದೆಹಲಿಯಲ್ಲಿ ಕುಳಿತು ಆದೇಶ ನೀಡುವ ಪ್ರಾಧಿಕಾರಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಅಲ್ಲಿ ಕುಳಿತು ಆಡಳಿತ ನಡೆಸುವವರಿಗೆ ನೆಲಮಟ್ಟದ ವಾಸ್ತವ ಸ್ಥಿತಿ ಅರ್ಥವಾಗುತ್ತಿಲ್ಲ ಎಂದರು.
ಪ್ರಸ್ತುತ ನಮ್ಮ ಜಲಾಶಯಗಳಲ್ಲಿನ ನೀರಿನ ಶೇ.50ರಷ್ಟನ್ನು ಕುಡಿಯುವುದಕ್ಕಾಗಿಯೇ ಮೀಸಲಿರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.


