ದೇಶದ ಸಂವಿಧಾನ, ಪ್ರಜಾಪ್ರಭುತ್ವ
ಅವಸಾನದ ಹಾದಿಗೆ ಸರಿಯುತ್ತಿದೆ
ಬೆಂಗಳೂರು: ಸಿಬಿಐ, ಐಟಿ, ಇಡಿ ಸಂಸ್ಥೆಗಳು ಈಗ ಸ್ವಾಯತ್ತ ಸಂಸ್ಥೆಗಳಾಗಿ ಉಳಿದಿಲ್ಲ, ಬಿಜೆಪಿ ಪಕ್ಷದ ಅಂಗ ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬುದಕ್ಕೆ ಕಳೆದ ಹತ್ತು ವರ್ಷಗಳಲ್ಲಿ ವಿರೋಧ ಪಕ್ಷಗಳ ನಾಯಕರ ಮೇಲೆ ನಡೆದ ಇಡಿ (ಜಾರಿ ನಿರ್ದೇಶನಾಲಯ) ದಾಳಿಯೇ ಸಾಕ್ಷಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಸ್ವಾರ್ಥ ರಾಜಕೀಯದ ಮೇರೆ ಮೀರಿದೆ, ವಿರೋಧ ಪಕ್ಷಗಳು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಬೇಕಿರುವುದು ಮಾತ್ರವಲ್ಲ ಆದಾಯ ತೆರಿಗೆ (ಐಟಿ), ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿದೇರ್ಶನಾಲಯ (ಇಡಿ) ಸಂಸ್ಥೆಗಳ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.
ಕೇಂದ್ರದ ಬಿಜೆಪಿ ಆಡಳಿತದಲ್ಲಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅವಸಾನದ ಹಾದಿಗೆ ಸರಿಯುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.


