ಬೆಂಗಳೂರು:ಸಚಿವ ಸಂಪುಟ ವಿಸ್ತರಣೆ ನಂತರ ಬುಗಿಲೆದ್ದ ಶಾಸಕರ ಬಂಡಾಯ ಶಮನಗೊಳಿಸಲು ಸಣ್ಣ ಪ್ರಮಾಣದಲ್ಲಿ ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಸ್ಟ್ 3 ರಂದು ಹೊಸದಾಗಿ 19 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಒಂದು ಖಾಲಿ ಸ್ಥಾನ ಉಳಿಸಿಕೊಂಡು ಮಂತ್ರಿಮಂಡಲ ವಿಸ್ತರಿಸಿದರು.
ಮೂಲ ಕಾಂಗ್ರೆಸ್ಸಿಗರ ಸಂದೇಶ
ವಿಸ್ತರಣೆ ನಂತರ ಮೂಲ ಕಾಂಗ್ರೆಸ್ನ ಹಿರಿಯ ಶಾಸಕರು, ವರಿಷ್ಠರ ವಿರುದ್ಧವೇ ತಿರುಗಿ ಬಿದ್ದು, ಹಸ್ತದ ಸಹವಾಸವೇ ಬೇಡ ಎಂಬ ಸಂದೇಶವನ್ನು ದೆಹಲಿಗೆ ರವಾನಿಸಿದರು.
ಕಳೆದ ಎರಡು-ಮೂರು ದಶಕಗಳಿಂದ ನಿಷ್ಠಾವಂತ ಕಾಂಗ್ರೆಸ್ ಸದಸ್ಯರಾಗಿ ವಿಧಾನಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ತಮ್ಮವರನ್ನು ಹೊರಗಿಟ್ಟು, ಜನತಾ ಪರಿವಾರದಿಂದ ಬಂದ 9 ಮಂದಿಗೆ ಮಂತ್ರಿಮಂಡಲದಲ್ಲಿ ಅವಕಾಶ ಮಾಡಿಕೊಟ್ಟಿದ್ದೀರಿ, ಇನ್ನು ನಮಗೆ ಎಲ್ಲಿ ನ್ಯಾಯ ಸಿಗುತ್ತದೆ ಎಂದು ಪ್ರಶ್ನೆಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬವನ್ನು ನಿಂದಿಸುವವರಿಗೆ ಸಂಪುಟದಲ್ಲಿ ಮಣೆ ಹಾಕಿದ್ದೀರಿ, ಚೆಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ಜಮೀರ್ ಅಹಮದ್ ಖಾನ್, ಕೆ.ಎಂ.ಶಿವಲಿಂಗೇಗೌಡ ಅವರಿಗೆ ಮಂತ್ರಿ ಸ್ಥಾನ ಕಲ್ಪಿಸಿದ್ದೀರಿ.
ಜನತಾ ಪರಿವಾರಕ್ಕೇ ಆದ್ಯತೆ
ಅಲ್ಲದೆ, ಸಂತೋಷ್ ಲಾಡ್, ಮಧುಬಂಗಾರಪ್ಪ, ಲಕ್ಷ್ಮಣ್ ಸವದಿ, ಬಸವರಾಜ ರಾಯರೆಡ್ಡಿ, ಇವರೆಲ್ಲ ಜನತಾ ಪರಿವಾರದವರು.
ವಲಸೆ ಬಂದವರಿಗೆ ಮಂತ್ರಿಮಂಡಲದಲ್ಲಿ ಶೇಕಡ 50ರಷ್ಟು ಅವಕಾಶ ಮಾಡಿದರೆ, ನಾವು ಏನು ಮಾಡಬೇಕು ಎಂದು ನೇರವಾಗಿ ವರಿಷ್ಠರನ್ನು ಪ್ರಶ್ನಿಸಿದ್ದಾರೆ.
ಮೂಲ ಕಾಂಗ್ರೆಸ್ನವರಿಂದಲೇ ಆಂತರಿಕವಾಗಿ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ ಎಂಬ ಮಾಹಿತಿ ಅರಿಯುತ್ತಿದ್ದಂತೆ, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕಳೆದ ಬುಧವಾರ ದಿಢೀರನೆ ನಗರಕ್ಕೆ ಧಾವಿಸಿ, ಬಿನ್ನಮತ ತಿಳಿಗೊಳಿಸಲು ಮುಂದಾದರು.
ಬಂಡಾಯಗಾರರ ಜೊತೆ ಮಾತುಕತೆ
ಈ ವೇಳೆಗೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಂಡಾಯ ಶಾಸಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು.
ಸುರ್ಜೇವಾಲ ನಗರಕ್ಕೆ ಧಾವಿಸುತ್ತಿದ್ದಂತೆ ಮುಖ್ಯಮಂತ್ರಿ ಜೊತೆಗೂಡಿ, ಹಿರಿಯ ಶಾಸಕ ಎಂ.ಕೃಷ್ಣಪ್ಪ ನಿವಾಸಕ್ಕೆ ತೆರಳಿ, ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
ನಿಮಗೆ ಅವಕಾಶ ದೊರೆಯುತ್ತದೆ, ನಾನು ನಿಮಗೆ ಮಾತುಕೊಡುತ್ತೇನೆ ಎಂದು ಸುರ್ಜೇವಾಲ ಸಮಾಜಾಯಿಷಿ ನೀಡಿದರು.
ಕಾಂಗ್ರೆಸ್ ನಂಬಿ ಅಧಿಕಾರ ಇಲ್ಲವಾಗಿದೆ
ಇದಕ್ಕೆ ಕೃಷ್ಣಪ್ಪ ಪ್ರತಿಕ್ರಿಯಿಸಿ, ಮಂತ್ರಿ ಸ್ಥಾನ ಖಾಲಿ ಇಲ್ಲ, ಮಹಿಳೆಗೆ ಒಂದು ಸ್ಥಾನ ಉಳಿಸಿ, ಮಂತ್ರಿಮಂಡಲ ವಿಸ್ತರಿಸಿದ್ದೀರಿ, ಇನ್ನೆಲ್ಲಿಂದ ನಮಗೆ ಕೊಡುತ್ತೀರಿ, ನಾವು ಕಾಂಗ್ರೆಸ್ ನಂಬಿಕೊಂಡು ಕುಳಿತಿದ್ದರಿಂದ ಯಾವ ಅಧಿಕಾರವೂ ಇಲ್ಲವಾಗಿದೆ, ಮನೆಯಲ್ಲೇ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಮೂರು ವರ್ಷದ ಹಿಂದೆ ಜೆಡಿಎಸ್ನಿಂದ ಬಂದ ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡುತ್ತೀರಿ, ನಾನು, ನನ್ನ ಮಗ ಮೂರ್ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಗೊಂಡಿದ್ದರೂ ನಮ್ಮನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಕೃಷ್ಣಪ್ಪ ಮಾತಿನಿಂದ ವಿಚಲಿತರಾದ ಸುರ್ಜೇವಾಲ ಪಕ್ಷದಿಂದ ಕೆಲವು ತಪ್ಪಾಗಿದೆ, ಅದನ್ನು ಸರಿಪಡಿಸಲು ಒಂದು ಹೊಸ ಯೋಜನೆ ಹಾಕಿದ್ದೇವೆ, ನಿಮಗೆ ಮಂತ್ರಿ ಸ್ಥಾನ ದೊರೆತೇ ದೊರೆಯುತ್ತದೆ, ಅದು ಹೇಗೆ ಎಂಬ ಪ್ರಶ್ನೆ ಬೇಡ, ನೀವು ನಮ್ಮ ಜೊತೆಯೇ ಇರಬೇಕು ಎಂದು ಮನವಿ ಮಾಡಿದರು.
ನಮ್ಮನ್ನು ಹೊರಗಿಟ್ಟಿದ್ದು ಏಕೆ
ನಂತರ ಪಕ್ಷದ ಹಿರಿಯ ಶಾಸಕರಾದ ಹೆಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ ಮನೆಗೆ ತೆರಳಿ, ಇದೇ ವಿಷಯವಾಗಿ ಸಮಾಲೋಚನೆ ನಡೆಸಿದಾಗ, ಇವರೂ ಸಹಾ ಕೃಷ್ಣಪ್ಪ ವಾದವನ್ನೇ ಮುಂದಿಟ್ಟರಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು, ಕೆಲವು ಶಾಸಕರು ಕಣಕ್ಕಿಳಿಯುವುದಿಲ್ಲ ಎಂಬುದು ನಿಮಗೆ ತಿಳಿದಿದ್ದರೂ, ಮಂತ್ರಿಮಂಡಲದಿಂದ ನಮ್ಮನ್ನು ಹೊರಗಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.
ಕೃಷ್ಣಪ್ಪ ಮತ್ತು ಹೆಚ್.ಕೆ.ಪಾಟೀಲ್, ಪಕ್ಷದ ಕೆಲವು ನಿರ್ಧಾರಗಳು ಎಲ್ಲಿ ತಪ್ಪಿವೆ ಎಂಬುದನ್ನು ನೇರವಾಗಿ ಸುರ್ಜೇವಾಲ ಗಮನಕ್ಕೆ ತಂದು, ತಕ್ಷಣ ಸರಿಪಡಿಸದಿದ್ದರೆ, ಮುಂದೆ ಪಕ್ಷ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಬೆಳವಣಿಗೆ ನಂತರ ಸುರ್ಜೇವಾಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಸಂಪರ್ಕಿಸಿ, ಒಂದಿಬ್ಬರ ರಾಜೀನಾಮೆ ಪಡೆದು, ಮೂರು ಮಂದಿಯನ್ನು ಹೊಸದಾಗಿ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು.
ಮೂಲ ಕಾಂಗ್ರೆಸ್ಸಿಗರಿಗೆ ಧಕ್ಕಬೇಕು
ತೆರವಾದ ಸ್ಥಾನಗಳು ಮೂಲ ಕಾಂಗ್ರೆಸ್ನವರಿಗೆ ಧಕ್ಕಬೇಕು, ಈ ಕಾರ್ಯ ತಕ್ಷಣವೇ ಆಗಬೇಕು ಎಂದು ವರಿಷ್ಠರ ಗಮನಕ್ಕೆ ತಂದಿದ್ದಾರೆ.
ಸುರ್ಜೇವಾಲ ಅವರ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಎಐಸಿಸಿ, ಬಂಡಾಯ ಶಮನಕ್ಕೆ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆಗೆ ಮುಂದಾಗುವ ಸಾಧ್ಯತೆಗಳು ಕಂಡುಬರುತ್ತಿವೆ.


