ಬೆಂಗಳೂರು:ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಲ್ಲದೆ, ಸಂಪುಟದ ಇನ್ನೂ ಮೂರ‍್ನಾಲ್ಕು ಮಂತ್ರಿಗಳ ವಿರುದ್ಧ ಜಾರಿ ನಿದೇರ್ಶನಾಲಯ (ಇ.ಡಿ.) ದಾಳಿ ನಡೆಸುವ ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಪ್ರತಿಪಕ್ಷ ನಾಯಕರ ಮೇಲೆ ನಿರಂತರವಾಗಿ ಇ.ಡಿ. ಮತ್ತು ಸಿಬಿಐ ದಾಳಿ ಮುಂದುವರೆದಿದೆ.
ಕಾಂಗ್ರೆಸ್ ಪಕ್ಷದ ಗುರಿ
ಕೇಂದ್ರದಲ್ಲಿನ ಆಡಳಿತ ಪಕ್ಷದ ಹಲವು ಮಂದಿ ವಿದೇಶದಲ್ಲಿ ಹೂಡಿಕೆ ಮಾಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಆದರೆ, ಕಾಂಗ್ರೆಸ್ ಪಕ್ಷದವರನ್ನು ಗುರಿ ಮಾಡಿ ದಾಳಿ ನಡೆಸಲಾಗುತ್ತಿದೆ.
ಮೂರ‍್ನಾಲ್ಕು ಸಚಿವರಷ್ಟೇ ಅಲ್ಲ, ನಮ್ಮ ಪಕ್ಷದ ಕೆಲವು ಮುಖಂಡರೂ ಇ.ಡಿ. ದಾಳಿ ಪಟ್ಟಿಯಲ್ಲಿದ್ದಾರೆ.
ತಡರಾತ್ರಿ ನನ್ನ ಸಹೋದ್ಯೋಗಿ ಸತೀಶ್ ಮನೆಗೆ ತೆರಳಿ ಧೈರ್ಯ ತುಂಬಿದ್ದೇನೆ, ನೀವೊಬ್ಬರೇ ಅಲ್ಲ, ಇನ್ನೂ ಕೆಲವರಿದ್ದಾರೆ ಎಂಬ ಮಾಹಿತಿ ನೀಡಿದ್ದೇನೆ ಎಂದರು.
ಸಲಹೆ-ಸೂಚನೆ
ಉನ್ನತ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಅವರು, ಸತೀಶ್ ಭೇಟಿ ಮಾಡಿದ ಸಂದರ್ಭದಲ್ಲಿ ಇ.ಡಿ. ದಾಳಿಗೆ ಸಂಬಂಧಿಸಿದಂತೆ ಅವರಿಂದ ಮಾಹಿತಿ ಪಡೆದು, ಅನುಭವದ ಆಧಾರದ ಮೇಲೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಕೆಲವು ಸಮುದಾಯದ ನಾಯಕರನ್ನು ಸೆಳೆಯಲು ಇಂತಹ ತಂತ್ರ ಕರ್ನಾಟಕದಲ್ಲಷ್ಟೇ ಅಲ್ಲ, ರಾಷ್ಟ್ರದ ವಿವಿಧ ಮೂಲೆಗಳಲ್ಲಿ ನಡೆದಿದೆ.
ನನಗೆ ಬಂದಿರುವ ಮಾಹಿತಿಯಂತೆ ಕೆಲವರ ಹೆಸರನ್ನು ಪ್ರಸ್ತಾಪಿಸಿ, ಇವರ ಮೇಲೂ ಮುಂದಿನ ದಿನಗಳಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ.
ಎದೆಗುಂದ ಬೇಡಿ
ನೀವು ಎದೆಗುಂದ ಬೇಡಿ, ನಿಮ್ಮ ಜೊತೆ ಪಕ್ಷ ಮತ್ತು ನಾವಿದ್ದೇವೆ, ನಾನು ಇದನ್ನು ಅನುಭವಿಸಿದ್ದೇನೆ, ಜೈಲಿಗೂ ಹೋಗಿಬಂದಿದ್ದೇನೆ.
ದಾಳಿ ಹಿಂದೆ ಯಾರದಾದರೂ ಕೈವಾಡ ಇರುವ ಬಗ್ಗೆ ನಿಮಗೆ ಅನುಮಾನ ಇದ್ದರೆ, ಯೋಚನೆ ಮಾಡಿ ಮತ್ತು ಎಚ್ಚರದಿಂದಿರಿ ಎಂದಿದ್ದಾರೆ.
ಎಲ್ಲರನ್ನೂ ನಂಬುವುದು ಬೇಡ ಎಂದು ಮುಖ್ಯಮಂತ್ರಿ ಅವರು ಸತೀಶ್ ಅವರಿಗೆ ಕಿವಿಮಾತು ಹೇಳಿದ್ದಲ್ಲದೆ, ಸುಮಾರು ಎರಡು ತಾಸು ಮುಖಾಮುಖಿ ಚರ್ಚೆ ಮಾಡಿದ್ದಾರೆ.


