ನವದೆಹಲಿ:ಸಿದ್ದರಾಮಯ್ಯ ಆಡಳಿತ ಕಾಲದಿಂದ ಇದುವರೆಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಡೆಸಿರುವ ಅಕ್ರಮಗಳ ತನಿಖಾ ಪ್ರಗತಿ ಪರಿಶೀಲಿಸಿ, ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಜಾರಿ ನಿರ್ದೇಶನಾಲಯ (ಇ.ಡಿ.) ತಂಡವೇ ದೆಹಲಿಯಿಂದ ಆಗಮಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಪ್ರಭಾವೀ ಸಚಿವ ಹಾಗೂ ಉದ್ಯಮಿ ಸತೀಶ್ ಜಾರಕಿಹೊಳಿ, ವಿದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿರುವುದು ಹಾಗೂ ಇಲಾಖಾ ಭ್ರಷ್ಟಾಚಾರ ಕುರಿತು ಲಭ್ಯವಾಗಿರುವ ಸಾಕ್ಷ್ಯಗಳ ಆಧಾರದ ಮೇಲೆ ವಿವಿಧ ಮೊಕದ್ದೆಮೆ ಹೂಡಿಕೆ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಲು ಉನ್ನತ ಮಟ್ಟದ ತಂಡ ಬಂದಿದೆ ಎನ್ನಲಾಗಿದೆ.
ಪೂರ್ಣ ಪರಿಶೀಲನೆ
ಇದರೊಂದಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬದಲಿ ನಿವೇಶನ, ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ನೇಮಕಾತಿಗಳಲ್ಲಿನ ಭ್ರಷ್ಟಾಚಾರ, ವಾಲ್ಮೀಕಿ ಮಹರ್ಷಿ ನಿಗಮದ ಹಗರಣ, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ನಡೆದಿರುವ ಹಗರಣಗಳ ಪೂರ್ಣ ಪರಿಶೀಲನೆಗೆ ಇ.ಡಿ. ನಿರ್ದೇಶಕರ ತಂಡವೇ ಆಗಮಿಸಿದೆ.
ಇ.ಡಿ. ನಿರ್ದೇಶಕ ರಾಹುಲ್ ನವೀನ್ ಜೊತೆಗೆ ವಿಶೇಷ ನಿರ್ದೇಶಕರುಗಳ ತಂಡ ರಾಜ್ಯಕ್ಕೆ ಧಾವಿಸಿದ್ದು, ಇತ್ತೀಚಿನ ಎಲ್ಲ ಹಗರಣಗಳ ಬಗ್ಗೆ ಖುದ್ದು ಪರಿಶೀಲಿಸಲು ಎರಡು ದಿನ ಇಲ್ಲಿಯೇ ಬಿಡಾರ ಹೂಡಲಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದಕ್ಷಿಣ ಆಫ್ರಿಕಾದ ವಿವಿಧ ದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಹಾಗೂ ತಮ್ಮ ಇಲಾಖೆಯ ಕಾಮಗಾರಿ ಗುತ್ತಿಗೆ ನೀಡುವ ವೇಳೆ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕರ್ನಾಟಕ ಮತ್ತು ಗೋವಾ ಇ.ಡಿ. ಅಧಿಕಾರಿಗಳು ಸತತ 37 ಗಂಟೆಗಳ ಕಾಲ ೨೦ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ, ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದ್ದರು.
ನೇಮಕಾತಿಯಲ್ಲಿ ಭ್ರಷ್ಟಾಚಾರ
ಇದನ್ನು ಆಧರಿಸಿ ಇ.ಡಿ., ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿ ಹಗರಣವಲ್ಲದೆ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ವಿವಿಧ ನೇಮಕಾತಿಯಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರದಿಂದ ಅರ್ಹರಿಗೆ ದೊರೆಯಬೇಕಾದ ಹುದ್ದೆಗಳು ಬೇರೆಯವರ ಪಾಲಾಗಿದೆ.
ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಆಗದವರಿಗೆ ಹುದ್ದೆ ನೀಡುವಲ್ಲಿ ಕೆಪಿಎಸ್‌ಸಿ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿ ಸದಸ್ಯರು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಸಿದ್ದರಾಮಯ್ಯ ಆಡಳಿತದ ಬಹುತೇಕ ಹಗರಣಗಳು ಬಯಲಾಗುತ್ತಿದ್ದು, ಇವುಗಳ ಪೂರ್ವಾಪರ ಪರಿಶೀಲನೆಗೆ ತಂಡ ಆಗಮಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


