ಬೆಂಗಳೂರು:ಮೈಸೂರು ಅರಮನೆ ಆವರಣದಲ್ಲಿ ಬುಧವಾರ ನಂದಿಧ್ವಜ ಪೂಜಾ ಸಂದರ್ಭದಲ್ಲಿ ಸಚಿವರನ್ನು ನಿರ್ಬಂಧಿಸಲು ಮುಂದಾದ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಆದೇಶದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಇತರ ಪೋಲಿಸ್ ಆಧಿಕಾರಿಗಳಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ.
ನಂದಿ ಧ್ವಜ ಪೂಜೆ
ದಸರಾ ಮಹೋತ್ಸವದ ಜಂಬೂ ಸವಾರಿ ಆರಂಭಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಜೊತೆಗೂಡಿ, ಮುಖ್ಯಮಂತ್ರಿ ಶಿವಕುಮಾರ್ ನಂದಿ ಧ್ವಜ ಪೂಜೆಗೆ ಆಗಮಿಸಿದರು.
ಶಿವಕುಮಾರ್ ಜೊತೆ ಸಚಿವರಾದ ಶಿವರಾಜ್ ತಂಗಡಗಿ, ಎಚ್.ಸಿ.ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ರಿಷ್ವಂತ್ ತಡೆದಿದ್ದರು.
ಇದನ್ನು ಗಮನಿಸಿದ ಮುಖ್ಯಮಂತ್ರಿ ತಕ್ಷಣವೇ ಅವರನ್ನು ಕಳುಹಿಸುವಂತೆ ಕೈಸನ್ನೆ ಮಾಡಿದರು, ಇಷ್ಟಾದರೂ ಬಸಂತಪ್ಪ ಮತ್ತು ನರೇಂದ್ರ ಸ್ವಾಮಿ ಅವರನ್ನು ಒಳಗೆ ಬಿಡಲು ಪೋಲಿಸರು ತಕರಾರು ಮಾಡಿದರು.
ಪೋಲಿಸ್ ಅಧಿಕಾರಿಗೆ ತರಾಟೆ
ಇದರಿಂದ ಸಿಟ್ಟಾದ ನರೇಂದ್ರಸ್ವಾಮಿ ಸಚಿವರನ್ನೇ ಗುರುತಿಸಲಾಗದ ಎಂತಹ ಪೋಲಿಸ್ ಅಧಿಕಾರಿ ಎಂದು ತರಾಟೆಗೆ ತೆಗೆದುಕೊಂಡರು.
ಈ ಪ್ರಸಂಗ ಮುಜುಗರ ಉಂಟು ಮಾಡುತ್ತಿದ್ದಂತೆ ಮುಖ್ಯಮಂತ್ರಿ ಅವರು, ಪೋಲಿಸ್ ಅಧಿಕಾರಿಗಳನ್ನು ಗದರಿಸಿ, ಸಚಿವರನ್ನು ತಮ್ಮ ಜೊತೆ ಪೂಜಾ ಕಾರ್ಯಕ್ಕೆ ಕರೆದೊಯ್ದರು.
ಸಚಿವರುಗಳಷ್ಟೇ ಅಲ್ಲದೆ, ಹಿರಿಯ ಶಾಸಕ ತನ್ವೀರ್ ಸೇಠ್ ಸೇರಿದಂತೆ ಇತರ ಶಾಸಕರಿಗೂ ಮುಖ್ಯಮಂತ್ರಿ ಜೊತೆ ತೆರಳಲು ಅವಕಾಶ ನೀಡಲಿಲ್ಲ.
ಶಿಸ್ತುಕ್ರಮಕ್ಕೆ ಆಗ್ರಹ
ಪೋಲಿಸ್ ಅಧಿಕಾರಿಯ ಉದ್ಧಟತನದ ಬಗ್ಗೆ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಬಳಿ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದರು.
ಮೈಸೂರು ಪ್ರವಾಸದಿಂದ ಹಿಂತಿರುಗುತ್ತಿದ್ದಂತೆ ಮುಖ್ಯಕಾರ್ಯದರ್ಶಿ ಅವರನ್ನು ಸಂಪರ್ಕಿಸಿದ ಮುಖ್ಯಮಂತ್ರಿ, ಅರಮನೆ ಆವರಣದಲ್ಲಿ ನಂದಿಧ್ವಜ ಪೂಜೆ ವೇಳೆ ಪೋಲಿಸ್ ಅಧಿಕಾರಿಗಳ ಅಸಭ್ಯ ವರ್ತನೆ ಕುರಿತು ವಿವರಣೆ ಪಡೆದು ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಪೂಜಾ ವೇಳೆ ಸಚಿವರಿಗೆ ಅಡ್ಡಿಪಡಿಸಿದ ಘಟನೆ ಅಧಿಕಾರಿಗಳ ಅಚಾತುರ್ಯದಿಂದ ಆಗಿದೆ ಎಂದರು.
ಮುಖ್ಯಕಾರ್ಯದರ್ಶಿ ತನಿಖೆ
ನಂದಿ ಧ್ವಜಕ್ಕೆ ಪೂಜೆ ಮಾಡಲು ಹೋಗುವಾಗ ಈ ಪ್ರಸಂಗ ನಡೆದಿದೆ, ನಾನೇ ಸಚಿವರನ್ನು ಬಿಡಿಸಿದೆ, ಈ ಬಗ್ಗೆ ಮುಖ್ಯಕಾರ್ಯದರ್ಶಿ ಪರಿಶೀಲನೆ ಹಾಗೂ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಹೊರತುಪಡಿಸಿ ದಸರಾ ಕಾರ್ಯಕ್ರಮ ಯಶಸ್ವಿಯಾಗಲು ಪೋಲಿಸ್ ಸಿಬ್ಬಂದಿ ಮತ್ತು ಅಧಿಕಾರಿ ವರ್ಗ ಸಾಕಷ್ಟು ಶ್ರಮಿಸಿದ್ದಾರೆ, ಅವರಿಗೆ ಕೈಮುಗಿದು ಧನ್ಯವಾದ ಹೇಳುತ್ತೇನೆ ಎಂದರು.
ಶಿವಮೊಗ್ಗ ದಸರಾದಲ್ಲಿ ಸಂಭವಿಸಿದ ದುರ್ಘಟನೆ ನನ್ನ ಗಮನಕ್ಕೆ ಬಂದಿದೆ, ಈ ವಿಷಯದಲ್ಲಿ ಸ್ವಲ್ಪ ಅಜಾಗರೂಕತೆ ತೋರಿದ್ದಾರೆ, ಮುಂದಿನ ಬಾರಿ ಇನ್ನಷ್ಟು ಎಚ್ಚರಿಕೆ ವಹಿಸಲಾಗುವುದು, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಲಿಲ್ಲ ಎಂದರು.


