ಬೆಂಗಳೂರು:ಕರ್ನಾಟಕದಲ್ಲಿನ ಸ್ಟಿಂಗ್ ಆಪರೇಷನ್ ಕಾರಣಕರ್ತರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಾಕೀತು ಮಾಡಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಎಐಸಿಸಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಗುರುವಾರ ದೆಹಲಿಗೆ ಕರೆಸಿಕೊಂಡು ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ಮಾಹಿತಿ ಪಡೆದಿದೆ.
ದೆಹಲಿಗೆ ಕರೆಸಿ ಮಾಹಿತಿ
ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಈ ಇಬ್ಬರೂ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಪ್ರತ್ಯೇಕವಾಗಿ ಸ್ಟಿಂಗ್ ಬಗ್ಗೆ ಮಾಹಿತಿ ಪಡೆದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಇಡೀ ದೇಶದ ಗಮನ ಸೆಳೆದು ಪಕ್ಷಕ್ಕೆ ಮುಜುಗರ ತರುತ್ತಿದೆ, ಅಲ್ಲದೆ, ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ಸಮುದಾಯದ ನಾಯಕ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿ ಇಟ್ಟುಕೊಂಡು ಸ್ಟಿಂಗ್ ಮಾಡಲಾಗಿದೆ.
ಅವರ ತೇಜೋವಧೆ ಮಾಡುವ ಹಾಗೂ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿರುವ ಬಗ್ಗೆ ಸಿದ್ದರಾಮಯ್ಯ ಎಲ್ಲಾ ಮಾಹಿತಿ ನೀಡಿದ್ದಾರೆ, ನೀವು ಇದುವರೆಗೆ ಏತಕ್ಕೆ ಕ್ರಮ ಕೈಗೊಂಡಿಲ್ಲ.
ರಾಹುಲ್ ಗಾಂಧಿ ಆದೇಶ
ಸ್ವತಃ ರಾಹುಲ್ ಗಾಂಧಿ ಈ ಪ್ರಕರಣವನ್ನು ಗಂಭಿರವಾಗಿ ತೆಗೆದುಕೊಂಡಿದ್ದು, ನಿಮ್ಮಿಂದ ವಿವರಣೆ ಪಡೆಯುವಂತೆ ನನಗೆ ಆದೇಶಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಪ್ರಕರಣವನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ, ಇದು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ, ನಿಮಗೆ ಎಲ್ಲ ವಿಚಾರಗಳು ತಿಳಿದಿದೆ ಎಂಬ ಮಾಹಿತಿ ಇದೆ, ಆದರೂ ಏತಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇಂತಹ ಘಟನೆಗಳನ್ನು ಪಕ್ಷ ಸಹಿಸುವುದಿಲ್ಲ, ತಕ್ಷಣ ಸಂಬಂಧಿಪಟ್ಟವರನ್ನು ಬಂಧಿಸಿ, ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದು, ಖಾಸಗಿ ಸುದ್ದಿವಾಹಿನಿ ಜೊತೆ ಶಾಮೀಲಾಗಿರುವ ಪಕ್ಷದ ಕೆಲವು ಕಾರ್ಯಕರ್ತರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಸಿಸಿಬಿ ಪೋಲಿಸರಿಂದ ವಿಚಾರಣೆ
ಪಕ್ಷದ ವರಿಷ್ಠರು ಮಧ್ಯೆಪ್ರವೇಶ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಸಿಸಿಬಿ ಪೋಲಿಸರು ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ದೆಹಲಿಯಲ್ಲಿ ಈ ಬೆಳವಣಿಗೆ ನಡೆಯುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಪುತ್ರ ಸಚಿವ ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ತಂದೆಯ ಹೆಸರು ಕೆಡಿಸಲು ಸ್ಟಿಂಗ್ ವಿಚಾರ ಮುನ್ನಲೆಗೆ ತಂದಿದ್ದಾರೆ, ತಂದೆಯ ತೇಜೋವಧೆ ಮಾಡಿ ಲೆಗೆಸಿ ಹಾಳು ಮಾಡಿ ಬ್ಲಾಕ್ ಮೇಲ್ ಮಾಡಲು ಪ್ರಯತ್ನ ನಡೆದಿದೆ ಎಂದರು.
ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ, ಪುತ್ತೂರು ವಿಧಾನಸಭಾ ಟಿಕೆಟ್ಗಾಗಿ ನಮ್ಮ ಪಕ್ಷದ ಒಬ್ಬ ಮಹಿಳೆ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.
ಕಳಂಕ ಇಲ್ಲದ ರಾಜಕಾರಣ
ಇದರಿಂದ ತಮ್ಮ ತಂದೆ ಬೇಜಾರಿಗಿದ್ದು, ಅವರು 40 ವರ್ಷ ಕಳಂಕ ಇಲ್ಲದ ರಾಜಕಾರಣ ಮಾಡಿದ್ದಾರೆ, ಸತ್ಯ ನಮ್ಮ ಕಡೆ ಇದೆ, ಸತ್ಯ ಹೊರಗೆ ಬರುತ್ತದೆ, ತಂದೆ ತಪ್ಪು ಮಾಡಿಲ್ಲ ಎಂದಾದರೆ ತಾಯಿ ಖುಷಿ ಪಡುತ್ತಾರೆ.
ಸ್ಟಿಂಗ್ ಪ್ರಕರಣ ಸಂಬಂಧ ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಮಾಹಿತಿ ಬಂದಿದೆ, ಪ್ರಕರಣದಲ್ಲಿ ಯಾರೇ ಇದ್ದರು ಅರೆಸ್ಟ್ ಮಾಡಲು ತಂದೆ ಹೇಳಿದ್ದಾರೆ.
ನಮ್ಮ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ, ತನಿಖೆ ಸರಿಯಾಗಿ ನಡೆಯುತ್ತಿದೆ, ಅಕಸ್ಮಾತ್ ತನಿಖೆ ಸರಿಯಾಗಿ ನಡೆಯಲಿಲ್ಲ ಎಂದಾದರೆ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದರು.


