ಬೆಂಗಳೂರು:ಸ್ಟಿಂಗ್ ಆಪರೇಷನ್ ಹಗರಣದ ಆರೋಪಿಗಳು ನಾಪತ್ತೆ ಆಗಿರುವವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಎಡಗೈ ಮತ್ತು ಬಲಗೈ ಬಂಟರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗುರುತರ ಆರೋಪ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಶುಕ್ರವಾರ ಮೈಸೂರಿನಲ್ಲಿ ತಮ್ಮ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿರುವವರು ನಮ್ಮ ಪಕ್ಷದವರೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಗೃಹ ಸಚಿವರು ಇಂತಹ ಆರೋಪ ಮಾಡಿದ್ದಾರೆ.
ರಿತೇಶ್ ಪಾಂಡೆ ನಗರಕ್ಕೆ
ದೆಹಲಿಯ ಕುಮಾರಸ್ವಾಮಿ ನಿವಾಸದಲ್ಲಿ ಕೆಲಸ ಮಾಡುತ್ತಿದ್ದವರು ಎನ್ನುವ ರಿತೇಶ್ ಪಾಂಡೆ ಎಂಬಾತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಜೆಡಿಎಸ್ನ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮೋಹನ್ ಗೌಡ ಎಂಬುವರ ಮನೆಗೆ ತೆರಳಿದ ಪೋಲಿಸರು ಅವರ ಕುಟುಂಬ ವರ್ಗಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆ ಪಕ್ಷದ ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಪರಾಧ ಪಿತೂರಿ ಇದೆ, ಇದರ ಸತ್ಯಾಸ್ತತೆಯನ್ನು ನಾವು ಬಯಲು ಮಾಡುತ್ತೇವೆ, ನಮ್ಮ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ, ಇಂದಲ್ಲಾ ನಾಳೆ ಸತ್ಯ ಬಹಿರಂಗಗೊಳ್ಳಲಿದೆ ಎಂದರು.

ಸ್ಟಿಂಗ್ ಉದ್ದೇಶ ಏನು
ಕಳೆದ ಕೆಲವು ವರ್ಷಗಳ ಹಿಂದೆ ನಡೆದ ಸ್ಟಿಂಗ್ ಆಪರೇಷನ್ ಪ್ರಸಂಗ ಈಗ ಹೊರಬರಲು ಕಾರಣವೇನು, ಇದರ ಹಿಂದೆ ಯಾರಿದ್ದಾರೆ, ಅವರ ಉದ್ದೇಶ ಏನು ಎಂಬ ಎಲ್ಲವನ್ನೂ ನಾವು ಬಯಲಿಗೆ ಎಳೆಯುತ್ತೇವೆ.
ನನ್ನ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರು ಎಂಬ ತನಿಖೆ ನಡೆಸುವಂತೆ ಸಿದ್ದರಾಮಯ್ಯ ದೂರು ಕೊಟ್ಟಿದ್ದಾರೆ, ಅಲ್ಲದೆ, ಈ ಸಂಬಂಧ ಹೇಳಿಕೆಯನ್ನೂ ನೀಡಿದ್ದಾರೆ.
ಕಳೆದ 2015, 2023 ಹಾಗೂ 2025ರಲ್ಲಿ ವಿಡಿಯೊ ಅಪ್ಲೋಡ್ ಆಗಿದೆ ಎನ್ನುತ್ತಾರೆ, ನಾವು ಗಡಿಬಿಡಿಯಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ.
ಸಿದ್ದರಾಮಯ್ಯ ಗೌರವದ ಪ್ರಶ್ನೆ
ಪಕ್ಷ ಮತ್ತು ಸರ್ಕಾರದ ಘನತೆ, ಅದಕ್ಕಿಂತ ಹೆಚ್ಚಾಗಿ ಇದು ಸಿದ್ದರಾಮಯ್ಯ ಅವರ ಗೌರವದ ಪ್ರಶ್ನೆ ಆಗಿದ್ದು, ಅದಕ್ಕೆ ಧಕ್ಕೆ ಆಗದಂತೆ ನಾವು ತನಿಖೆ ನಡೆಸುತ್ತೇವೆ, ಇದರಲ್ಲಿ ರಾಜಿಯೇ ಇಲ್ಲ ಎಂದರು.
ತನಿಖೆಯನ್ನು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಮಾಡುತ್ತೇವೆ, ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ, ವಿಕ್ಕಿ ಎಂಬ ವ್ಯಕ್ತಿಯ ಹತ್ಯೆ ಮಾಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ದೂರಗಳು ಬಂದಿಲ್ಲ, ಈ ಸಂಬಂಧ ಕುಮಾರಸ್ವಾಮಿ ದೂರು ನೀಡಿದರೆ, ತನಿಖೆ ನಡೆಸಲಾಗುವುದು.

ದೊಡ್ಡವರಿಗೆ ಗೊತ್ತಿರುತ್ತೆ
ನಿಮ್ಮ ವೈಯಕ್ತಿಕ ದ್ವೇಷಗಳನ್ನು ನಮ್ಮ ಮೂಲಕ ತೀರಿಸಿಕೊಳ್ಳಬೇಡಿ, ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಬೇಕಾದವರು ತಪ್ಪಿಸಿಕೊಂಡಿದ್ದಾರೆ, ಈ ವಿಚಾರ ದೊಡ್ಡವರಿಗೆ ಗೊತ್ತಿರುತ್ತೆ, ಅವರನ್ನು ಕಳುಹಿಸಿಕೊಡಲು ಹೇಳಿ, ಅವರು ಯಾರೆಂದು ಕುಮಾರಸ್ವಾಮಿ ಅವರಿಗೆ ಗೊತ್ತು ಎಂದರು.
ಈ ಮಧ್ಯೆ, ಜೆಡಿಎಸ್ ಜಾಲತಾಣ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮೋಹನ್ ಗೌಡ ಮತ್ತು ಎಚ್.ಎಸ್.ಚಂದನ್ ಅವರಿಗೆ ಸೈಬರ್ ಕ್ರೈಮ್ ಪೋಲಿಸರು ನೋಟಿಸ್ ಜಾರಿ ಮಾಡಿ, ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ದೂರಿನ ಕುರಿತು ನೀವು ಬಳಕೆ ಮಾಡುವ ಮೊಬೈಲ್ ಫೋನ್, ಲ್ಯಾಪ್ ಟ್ಯಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.


