ಬೆಂಗಳೂರು:ಐಪಿಎಲ್ ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿ ವಿಜಯೋತ್ಸವ ಆಚರಣೆಗೆ ನಗರ ಪೋಲಿಸರಿಗೆ ಅರ್ಜಿ ಸಲ್ಲಿಸಿದ್ದ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಆರ್‌ಸಿಬಿ ತಂಡಕ್ಕೆ ಗೆಲ್ಲುತ್ತೇವೆ ಎಂಬ ಕನಸು ಬಿದ್ದಿತ್ತಾ ಎಂದು ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಫೈನಲ್ಸ್ ಪಂದ್ಯ ಆರಂಭವಾಗಿದ್ದು ಸಂಜೆ 7-30ಕ್ಕೆ, ಆದರೆ, ಅಂದು ಸಂಜೆ 6 ಗಂಟೆಗೇ ವಿಜಯೋತ್ಸವ ಆಚರಣೆಗೆ ಅನುಮತಿ ಕೊಡಿ ಎಂಬುದಾಗಿ ನಗರ ಪೊಲೀಸರಿಗೆ ಆರ್‌ಸಿಬಿ ಅರ್ಜಿ ಕೊಟ್ಟಿದೆ ಎಂದು ಹೇಳಿದರು.
ತಂಡದ ಗೆಲುವು ಹೇಗೆ ಗೊತ್ತಿತ್ತು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುವುದಾಗಿ ಅರ್ಜಿ ಹಾಕಿದ್ದಾರೆ, ಇದು ಹೇಗೆ ಸಾಧ್ಯ, ಪಂದ್ಯ ಆರಂಭಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿಗೆ ತಮ್ಮ ತಂಡ ಗೆಲ್ಲುತ್ತದೆ ಎಂದು ಹೇಗೆ ಗೊತ್ತಿತ್ತು.
ಪಂದ್ಯಕ್ಕೆ ಮೊದಲೇ ಇನ್ನೊಂದು ಅರ್ಜಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕೊಟ್ಟು ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಮಾಡೋಕೆ ಅವಕಾಶ ಕೊಡಿ ಎಂದು ಕೇಳುತ್ತಾರೆ, ಇದು ಹೇಗೆ ಸಾಧ್ಯ ಎಂದರು.
ಈ ಎಲ್ಲಾ ಪತ್ರಗಳನ್ನು ಯಾರು ಬರೆದಿದ್ದರು, ಪಂದ್ಯ ಮುಗಿದ ಮರುದಿನ ಬೆಳಗ್ಗೆ 7-30ಕ್ಕೆ ಪೊಲೀಸ್ ಕಮೀಷನರ್ ಮೇಲೆ ಒತ್ತಡ ಹಾಕಿದ್ದು ಯಾರು ಎನ್ನುವುದೂ ಗೊತ್ತಿದೆ, ಅದನ್ನೇ ಹೇಳಿದ್ದೇನೆ, ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ, ಅಸೂಯೆಯಿಂದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾತನಾಡಿಲ್ಲ.
ಸರ್ಕಾರಕ್ಕೆ ಜ್ಞಾನೋದಯ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದ ರಾಜು ಅವರನ್ನು ಕಿತ್ತು ಹಾಕಿರುವುದು ಒಳ್ಳೆಯ ಕ್ರಮ, ಸರ್ಕಾರಕ್ಕೆ ಜ್ಞಾನೋದಯ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಘಟನೆ ಸಂಬಂಧ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಸರಿಯಲ್ಲ, ಇದರ ಅವಶ್ಯಕತೆ ಇರಲಿಲ್ಲ, ಸರ್ಕಾರ ಹೀಗೆ ನಡೆದುಕೊಂಡರೆ ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ, ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿಗಳ ತಲೆದಂಡ ಸರಿಯಲ್ಲ.
ಸರ್ಕಾರ ಸೂಕ್ಷ್ಮವಾಗಿ ಯೋಚನೆ ಮಾಡಬೇಕಿತ್ತು, ಘಟನೆ ಮೂಲ ಕಾರಣಗಳೇ ಬೇರೆ, ಅದನ್ನು ಸರ್ಕಾರ ಮರೆ ಮಾಚುತ್ತಿದೆ ಎಂದರು.
ಹೆಣದ ಮೇಲೆ ರಾಜಕೀಯ
ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದು, ನಮಗೆ ಹೆಣದ ಮೇಲೆ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ, ಇದ್ದ ವಿಷಯವನ್ನೇ ಹೇಳಿದ್ದೇನೆ, ನನ್ನ ಮಿತ್ರ ಪಕ್ಷವೂ ಅದನ್ನೇ ಹೇಳಿದೆ, ನಡೆದಿರುವುದನ್ನು ಹೇಳಿದ್ದೇವೆ, ಇದರಲ್ಲಿ ರಾಜಕೀಯ ಏನಿದೆ.
ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದ ಮೇಲೆಯೂ ಕ್ರೀಡಾಂಗಣಕ್ಕೆ ಹೋಗಿ ಕಪ್‌ಗೆ ಮುತ್ತಿಕ್ಕಿ ಶೋ ಮಾಡಿದ್ದು ಯಾರು, ಜನರೇ ಎಲ್ಲವನ್ನೂ ನೋಡಿದ್ದಾರೆ, ಮಾಧ್ಯಮಗಳು ಎಲ್ಲವನ್ನೂ ಪ್ರಸಾರ ಮಾಡಿವೆ ಎಂದರು.
ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ಹೊರಬೇಕು, ಮೂವರದೂ ತಪ್ಪಿದೆ.
ಕಾಟಾಚಾರಕ್ಕೆ ಸನ್ಮಾನ
ಪಂದ್ಯ ಗೆದ್ದ 24 ಗಂಟೆ ಒಳಗೆ ಆತುರಾತುರವಾಗಿ ಸನ್ಮಾನ ಮಾಡೋದು ಏನಿತ್ತು, ಸನ್ಮಾನವನ್ನಾದರೂ ಸರಿಯಾಗಿ ಮಾಡಿದ್ದಾರಾ, ಕಾಟಾಚಾರಕ್ಕೆ ಮಾಡಿದರು, ಆಟಗಾರರನ್ನೂ ಸರಿಯಾಗಿ ನಡೆಸಿಕೊಳ್ಳಲಿಲ್ಲ, ಇವರು ಕೊಟ್ಟ ಶಾಲು, ಪೇಟ ತೆಗೆದುಕೊಂಡು ಹೋದರೋ ಬಿಸಾಕಿ ಹೋದರೋ ಗೊತ್ತಿಲ್ಲ, ಈ ಪುರುಷಾರ್ಥಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ ಎಂದರು.
ನೈತಿಕತೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆ ಕೊಡಬೇಕು.
ನಾವು ರಾಜಕಾರಣಿಗಳು ಭಂಡರು ಎಂಬುದಾಗಿ ತೋರಿಸಿಕೊಂಡಿದ್ದೇವೆ, ಇಂತಹವರಿಂದ ರಾಜೀನಾಮೆ ನಿರೀಕ್ಷೆ ಮಾಡೋಕೆ ಆಗುವುದಿಲ್ಲ, ವಿರೋಧ ಪಕ್ಷವಾಗಿ ನಾವು ಒತ್ತಾಯ ಮಾಡಿದ್ದೇವೆ.
ಹೆಚ್ಚಿನ ಪರಿಹಾರ ನೀಡಬೇಕು
ದುರಂತದಲ್ಲಿ ಜೀವ ಕಳೆದುಕೊಂಡವರು ವಾಪಸ್ ಬರುವುದಿಲ್ಲ, ಜೀವಕ್ಕೆ ದುಡ್ಡಿನ ಬೆಲೆ ಕಟ್ಟಲು ಆಗದು, ಇದು ಸರ್ಕಾರವೇ ಎಸಗಿದ ತಪ್ಪು, ಕುಟುಂಬಗಳಿಗೆ ಆಗಿರುವ ದುಃಖವನ್ನು ನೀಗಿಸಲು ಸಾಧ್ಯವಿಲ್ಲ, ಇದನ್ನು ವಿಶೇಷ ಪ್ರಕರಣ ಎಂಬುದಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕು.
ವರನಟ ಡಾ.ರಾಜ್‌ಕುಮಾರ್ ನಿಧನ ಸಂದರ್ಭದಲ್ಲಿ ಏನೇನು ನಡೆಯಿತು ಎಂಬುದನ್ನು ಈಗಾಗಲೇ ಹೇಳಿದ್ದೇನೆ, ಸರ್ಕಾರ ಅಣ್ಣಾವ್ರ ವಿಷಯ ಇಟ್ಟುಕೊಂಡು ಕಾಲ್ತುಳಿತ ಪ್ರಕರಣದಲ್ಲಿ ರಕ್ಷಣೆ ಪಡೆಯೋದು ಬೇಡ ಎಂದರು.

