ಬೆಂಗಳೂರು:ಖಾತೆ ಹಂಚಿಕೆ ಅಸಮಾಧಾನದಿಂದ ರಾಮಲಿಂಗಾ ರೆಡ್ಡಿ ಸಂಪುಟಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸುವಂತೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ವೇಳೆ, ಉಪಸ್ಥಿತರಿರಲು ರಾಜ್ಯಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸಚಿವರಾಗಿ ಪಕ್ಷಕ್ಕೇ ವಿರೋಧ
ಸಚಿವರಾಗಿ ಪಕ್ಷದ ನಿರ್ಧಾರದ ವಿರುದ್ಧವೇ ನಡೆದುಕೊಂಡರೆ ಅಂತಹವರ ಅಗತ್ಯ ಇಲ್ಲ.
ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವುದರಿಂದ ಒಮ್ಮೆ ಅವರೊಂದಿಗೆ ಮಾತನಾಡಿ, ಖಾತೆ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ, ಆದಾಗ್ಯೂ ಸಮ್ಮತಿಸದಿದ್ದರೆ ರಾಜೀನಾಮೆ ಅಂಗೀಕರಿಸಿ.
ಸಿದ್ದರಾಮಯ್ಯ ಸಂಪುಟದಲ್ಲಿ ಕೃಷ್ಣಬೈರೇಗೌಡ ಉತ್ತಮ ಕಾರ್ಯನಿರ್ವಹಿದ್ದನ್ನು ಗಮನದಲ್ಲಿ ಇಟ್ಟುಕೊಂಡು, ಅವರಿಗೆ ಬೆಂಗಳೂರು ನಗರದ ಉಸ್ತುವಾರಿ ವಹಿಸುವಂತೆ ನಾನೇ ಸಲಹೆ ಮಾಡಿದ್ದೆ.
ಸಚಿವರಾಗಲು ಸಮರ್ಥರಲ್ಲ
ಅದರಂತೆ ಖಾತೆಯನ್ನೂ ನೀಡಿದ್ದೀರಿ, ಇದೇ ಖಾತೆಗೆ ಪಟ್ಟು ಹಿಡಿದು ಬೇರೆ ಖಾತೆ ನಿರ್ವಹಿಸಲು ಒಪ್ಪದಿದ್ದರೆ, ಸಚಿವರಾಗಲು ಸಮರ್ಥರಲ್ಲ.
ಮನವೊಲಿಸಲು ಒಮ್ಮೆ ಪ್ರಯತ್ನಿಸಿ, ಪಕ್ಷದ ಮನವಿಗೆ ಸ್ಪಂದಿಸದಿದ್ದರೆ, ರಾಜೀನಾಮೆ ಅಂಗೀಕರಿಸಿ ಮುಂದೆ ನೋಡೋಣ ಎಂದಿದ್ದಾರೆ.
ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರ ಕೈಸೇರುತ್ತಿದ್ದಂತೆ ಶಿವಕುಮಾರ್ ಮನವೊಲಿಕೆ ಪ್ರಯತ್ನ ನಡೆಸಿದರು, ಆದರೆ, ರೆಡ್ಡಿ ತಮ್ಮ ದೂರವಾಣಿ ಸಂಪರ್ಕ ಕಡಿತಗೊಳಿಸಿ ಅಜ್ಞಾತ ಸ್ಥಳಕ್ಕೆ ತೆರಳಿದರು.
ಬದಲಾವಣೆಗೆ ಅನುಮತಿ ಕೋರಿಕೆ
ರಾಹುಲ್ ರಾಜ್ಯ ಪ್ರವಾಸಕ್ಕೂ ಮುನ್ನ ರೆಡ್ಡಿ ಮನವೊಲಿಕೆಗೆ ನಡೆಸಿದ ಯತ್ನ ವಿಫಲವಾದ ನಂತರ ಅನಿವಾರ್ಯವಾಗಿ ಪಕ್ಷದ ಅಧಿನಾಯಕನಿಗೆ ವಿಷಯ ತಿಳಿಸಿ, ಕೆಲವು ಇಲಾಖೆಗಳ ಬದಲಾವಣೆಗೆ ಅನುಮತಿ ನೀಡುವಂತೆ ಕೋರಿದರು.
ಇದಕ್ಕೆ ಒಪ್ಪದ ರಾಹುಲ್, ಇಂತಹ ವಿಚಾರಗಳನ್ನು ಸಹಿಸಲು ಸಾಧ್ಯವಿಲ್ಲ, ರಾಜೀನಾಮೆ ಅಂಗೀಕರಿಸಿ ಎಂದರು.
ರಾಹುಲ್ ಆದೇಶ ವಿವರ ತಿಳಿಯುತ್ತಿದ್ದಂತೆ ಸಚಿವ ಮುನಿಯಪ್ಪ, ಖಾತೆ ಹಂಚಿಕೆ ಕುರಿತು ವ್ಯಕ್ತಪಡಿಸಿದ್ದ ಅಸಮಾಧಾನ ಕೈಬಿಟ್ಟು ಇಲಾಖೆ ನಿರ್ವಹಣೆಗೆ ಸಿದ್ಧ, ಇದರ ಜೊತೆ ಇನ್ನೊಂದು ಖಾತೆ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.


