ಬೆಂಗಳೂರು:ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ವೇಳೆ ಕೆಎಸ್‌ಸಿಎ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರುಗಳನ್ನು ದೆಹಲಿಗೆ ಬುಲಾವ್ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಪರಮೇಶ್ವರ್ ಸೇರಿದಂತೆ ಇನ್ನೂ ಕೆಲವು ಅಧಿಕಾರಿಗಳ ತಲೆದಂಡ ಆಗಬಹುದೆಂದು ಹೇಳಲಾಗುತ್ತಿದೆ.
ವರಿಷ್ಠರ ಸೂಚನೆಯಂತೆ ಮೂವರು ನಾಳೆ ದೆಹಲಿಗೆ ತೆರಳುತ್ತಿದ್ದಾರೆ, ಶಿವಕುಮಾರ್ ದೆಹಲಿಯಲ್ಲಿ ಇರುವರಾದರೂ, ಬೆಂಗಳೂರಿಗೆ ಹಿಂತಿರುಗಿ ಮುಖ್ಯಮಂತ್ರಿ ಜೊತೆ ದೆಹಲಿಗೆ ತೆರಳಲಿದ್ದಾರೆ.
ರಾಜಕೀಯ ಕಾರ್ಯದರ್ಶಿ ಸೂಚನೆ
ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಈ ಮೂವರು ನಾಯಕರನ್ನು ಸಂಪರ್ಕಿಸಿ ನಾಳೆ ಮಧ್ಯಾನ್ಹ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ.
ಸಭೆಗೆ ಬರುವುದಕ್ಕೂ ಮುನ್ನ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ತರುವಂತೆಯೂ ಆದೇಶಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಡಾ.ಪರಮೇಶ್ವರ್ ಅವರನ್ನು ಇಂದು ಬೆಳಗ್ಗೆ ಸಂಪರ್ಕಿಸಿದ ವೇಣುಗೋಪಾಲ್, ಮಾಹಿತಿ ಕಲೆ ಹಾಕಿದ್ದಾರೆ.
ನನ್ನನ್ನೂ ಕತ್ತಲೆಯಲ್ಲಿಟ್ಟಿದ್ದರು
ಸಂಭ್ರಮಾಚರಣೆ ಮತ್ತು ನಂತರ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ಮತ್ತು ಪೋಲಿಸರು ಮಾಹಿತಿ ನೀಡದೆ ನನ್ನನ್ನೂ ಕತ್ತಲೆಯಲ್ಲಿ ಇಟ್ಟಿದ್ದರು.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಅವರೇ ವಿಧಾನಸೌಧದ ಮುಂದೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದು ಸಹಾ ನನಗೆ ಅಂದು ಮಧ್ಯಾನ್ಹದವರೆಗೂ ಯಾವುದೇ ಮಾಹಿತಿ ಇರಲಿಲ್ಲ, ಆ ನಂತರವಷ್ಟೇ ಡಿಪಿಆರ್ ವತಿಯಿಂದ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿತ್ತು.
ಪ್ರಮುಖರ ಪುತ್ರನ ನಿರ್ಧಾರ
ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಕಹಿ ಘಟನೆಗಳಿಗೂ ನನಗೂ ಸಂಬಂಧ ಇಲ್ಲ, ನನ್ನ ಇಲಾಖೆಯ ಪ್ರಮುಖ ನಿರ್ಧಾರಗಳನ್ನು ಪ್ರಮುಖ ಆಡಳಿತಗಾರರೊಬ್ಬರ ಪುತ್ರ ತೆಗೆದುಕೊಳ್ಳುತ್ತಿದ್ದಾರೆ.
ನಾನು ಈ ವಿಷಯದಲ್ಲಿ ನಿಸ್ಸಹಾಯಕ ಎಂದಾಗ, ಇಂತಹ ವಿಷಯಗಳನ್ನು ತಮ್ಮ ಗಮನಕ್ಕೆ ಇದುವರೆಗೆ ಏತಕ್ಕೆ ತರಲಿಲ್ಲ ಎಂದು ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ಮಂಗಳೂರು ಘಟನೆಗೆ ಸಂಬಂಧಿಸಿದಂತೆಯೂ ಅಲ್ಲಿನ ಅಲ್ಪಸಂಖ್ಯಾತ ಮುಖಂಡರು ಗೃಹ ಸಚಿವರ ವಿರುದ್ಧ ನೀಡಿರುವ ದೂರಿನ ಬಗ್ಗೆಯೂ ಸಮಜಾಯಿಷಿ ಪಡೆದಿದ್ದಾರೆ.
ಕಾಂಗ್ರೆಸ್‌ನಿಂದ ದೂರ
ಅಲ್ಪಸಂಖ್ಯಾತ ಸಂಘಟನೆಗಳು ಗೃಹ ಸಚಿವರನ್ನು ಕೈಬಿಡಬೇಕು, ಆರ್‌ಎಸ್‌ಎಸ್ ಕೈಗೊಂಬೆಯಾಗಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು, ಇಲ್ಲವಾದರೆ ನಾವು ಕಾಂಗ್ರೆಸ್‌ನಿಂದ ದೂರ ಉಳಿಯುವುದಾಗಿ ಎಐಸಿಸಿಗೆ ತಿಳಿಸಿದ್ದರು.
ದೂರಿನಲ್ಲಿ ಕೇರಳದ ಪ್ರಮುಖ ಮುಖಂಡರುಗಳೂ ಇದ್ದು, ಈ ಹಿನ್ನೆಲೆಯಲ್ಲಿ ಅದರಲ್ಲೂ ವೇಣುಗೋಪಾಲ್, ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿದ್ದಾರೆ.
ವರಿಷ್ಠರು ಜೂನ್ 10ರಂದು ದೆಹಲಿಗೆ ಬರುವಂತೆ ಸೂಚಿಸಿದ ಬೆನ್ನಲ್ಲೇ ನಿನ್ನೆ ಮುಖ್ಯಮಂತ್ರಿ ಅವರು ಕಾವೇರಿ ನಿವಾಸಕ್ಕೆ ಶಿವಕುಮಾರ್ ಹಾಗೂ ಡಾ.ಪರಮೇಶ್ವರ್ ಅವರನ್ನು ಕರೆಸಿಕೊಂಡು ಸುದೀರ್ಘ ಚರ್ಚೆ ಮಾಡಿದ್ದರು.

