ಬೆಂಗಳೂರು:ಪ್ರಸಕ್ತ ರಾಜ್ಯ ರಾಜಕಾರಣದ ಬಗ್ಗೆ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ದೀರ್ಘ ವಿದೇಶ ಪ್ರವಾಸದ ನಂತರ ಮಂಗಳವಾರ ಮುಂಜಾನೆ ದೆಹಲಿಗೆ ಆಗಮಿಸುತ್ತಿದ್ದು, ಅವರನ್ನು ಬುಧವಾರ, ಇಲ್ಲವೇ, ಗುರುವಾರ ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ.
ರಾಹುಲ್ ಭೇಟಿ ಮಾಹಿತಿ ಇಲ್ಲ
ದೆಹಲಿ ಪ್ರವಾಸವನ್ನು ಮುಖ್ಯಮಂತ್ರಿ ಸಚಿವಾಲಯ ದೃಢಪಡಿಸಿದೆ, ಆದರೆ, ರಾಹುಲ್ ಭೇಟಿ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಅದ್ದೂರಿ ಹಾಗೂ ವಿಶೇಷವಾಗಿ ಅಚರಿಸಲು ಮುಖ್ಯಮಂತ್ರಿ ಈಗಾಗಲೇ ತೀರ್ಮಾನ ಕೈಗೊಂಡಿದ್ದಾರೆ.
ಹಿಂದಿನಂತೆ ಈ ಬಾರಿಯೂ ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನ ಆಯೋಜನೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರು ಬುಧವಾರ ದೆಹಲಿಗೆ ತೆರಳುತ್ತಿದ್ದಾರೆಂದು ಸಚಿವಾಲಯ ತಿಳಿಸಿದೆ.
ದಸರಾ ವೈಮಾನಿಕ ಪ್ರದರ್ಶನ
ಬುಧವಾರ ಸಂಜೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ದಸರಾ ಉತ್ಸವ ವೇಳೆ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಕೋರಲಿದ್ದಾರೆ.
ಇದು ದೆಹಲಿ ಪ್ರವಾಸದ ಒಂದು ಭಾಗವಾದರೆ, ಮುಖ್ಯವಾಗಿ ರಾಜಕೀಯ ವಿಷಯ ಚರ್ಚೆ ಉದ್ದೇಶದಿಂದಲೇ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ.

ರಾಷ್ಟ್ರದಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳನ್ನು ಪಕ್ಷಕ್ಕೆ ಸೆಳೆಯಲು ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಸಿದ್ದರಾಮಯ್ಯ ಆಸಕ್ತಿ ಇಲ್ಲ
ಅದರಲ್ಲಿ ತಮಗೆ ಪ್ರಮುಖ ಪಾತ್ರ ನೀಡಿರುವುದಕ್ಕೆ ಸಿದ್ದರಾಮಯ್ಯ ಅವರಲ್ಲಿ ಆಸಕ್ತಿ ಇದ್ದಂತಿಲ್ಲ, ಅವರು ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವ ಇಚ್ಛೆ ಹೊಂದಿದ್ದಾರೆ.
ಈ ವಿಷಯವೂ ಸೇರಿದಂತೆ ವಿಧಾನ ಪರಿಷತ್‌ನ ತೆರವಾಗಿರುವ ನಾಲ್ಕು ಸ್ಥಾನಗಳಿಗೆ ನೇಮಕಾತಿ, ಜೊತೆಯಲ್ಲೇ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸುವ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದಾರೆ.
ಮತ್ತೊಂದೆಡೆ ರಾಹುಲ್ ಗಾಂಧಿ ದೇಶಕ್ಕೆ ಹಿಂತಿರುಗುತ್ತಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ, ಶಿವಕುಮಾರ್ ಅವರು, ಮುಖ್ಯಮಂತ್ರಿಗೆ ಒಂದು ದಿನ ಮುಂಚಿತವಾಗಿ ದೆಹಲಿಗೆ ತೆರಳಲಿದ್ದಾರೆ.
ಇತರ ಮುಖಂಡರ ಭೇಟಿ ಇಲ್ಲ
ಈ ಬಾರಿ ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿ ಅವರು, ರಾಜನಾಥ್ ಸಿಂಗ್ ಹಾಗೂ ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿ ಪಕ್ಷದ ಉಳಿದ ಯಾವುದೇ ಮುಖಂಡರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ.

ಕಳೆದ 15 ದಿನಗಳ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ತೆರಳಿದ್ದಾಗ, ತಮ್ಮ ಆಪ್ತ ಸಚಿವರ ಜೊತೆಗೂಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಇಲಾಖಾ ವಿಷಯಗಳ ಕಾರ್ಯನಿಮಿತ್ತ ದೆಹಲಿಗೆ ನಾಳೆಯಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದು, ಈ ವೇಳೆ ಎಐಸಿಸಿ ವರಿಷ್ಠರ ಸಮಯ ದೊರೆತರೆ ಭೇಟಿ ಮಾಡುತ್ತೇನೆ, ಹೈಕಮಾಂಡ್ ನಮಗೆ ದೇವಸ್ಥಾನ ಇದ್ದಂತೆ ಕೈಮುಗಿದು ಬರುತ್ತೇವೆ ಎಂದರು.


