ಬೆಂಗಳೂರು:ಪಕ್ಷ ವಿರೋಧಿ ಹಾಗೂ ನಾಯಕತ್ವದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವ ಶಾಸಕರು, ಸಚಿವರು ಮತ್ತು ಮುಖಂಡರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಾಂಗ್ರೆಸ್ ವರಿಷ್ಠರು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಇನ್ನೂ ಬಲಿಷ್ಠವಾಗಿದೆ ಎಂಬುದನ್ನು ತೋರಿಸುವ ಉದ್ದೇಶದಿಂದಲೇ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಲಾಯಿತು.
ಶಿಸ್ತು ಕಾಪಾಡಲು ಸೂಚನೆ
ವಜಾ ಆದೇಶದ ಜೊತೆಗೆ ಪಕ್ಷ ಮತ್ತು ಸರ್ಕಾರದಲ್ಲಿ ಶಿಸ್ತು ಕಾಪಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ರಮ ತೆಗೆದುಕೊಳ್ಳುವಂತೆ ಎಐಸಿಸಿ ಸೂಚಿಸಿದೆ.
ಕರ್ನಾಟಕ ಕಾಂಗ್ರೆಸ್‌ಗೆ ಮಾತ್ರವಲ್ಲ ಇಡೀ ರಾಷ್ಟ್ರದಲ್ಲಿ ಪಕ್ಷದ ಶಿಸ್ತಿಗೆ ಬದ್ಧರಾಗಿರಬೇಕು ಎಂಬ ಸೂಚನೆಯೂ ಇದಾಗಿದೆಯಂತೆ.
ಕಳೆದ ಎರಡು ವರ್ಷಗಳಿಂದ ನಾಯಕತ್ವ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಶಾಸಕರು, ಸಚಿವರೇ ಹಾದಿಬೀದಿಯಲ್ಲಿ ಮಾತನಾಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ತೀಕ್ಷ್ಣ ಎಚ್ಚರಿಕೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಈ ಸಚಿವರುಗಳಿಗೆ ತೀಕ್ಷ್ಣವಾಗಿ ಎಚ್ಚರಿಸಿದ್ದರೂ ತಮ್ಮ ದಾಟಿಯಿಂದ ಹಿಂದೆ ಸರಿದಿರಲಿಲ್ಲ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲೇ ಸುದ್ದಿಗೋಷ್ಠಿ ಕರೆದು ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬುದಾಗಿ ಹೇಳಿಕೆ ನೀಡಿದ್ದರು, ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ ವರಿಷ್ಠರನ್ನು ಮುಜುಗರಕ್ಕೆ ಸಿಲುಕಿಸಿತ್ತು.
ಮತಗಳ್ಳತನ ವಿಷಯದಲ್ಲಿ ರಾಹುಲ್ ಗಾಂಧಿ ವಿರುದ್ಧವೇ ರಾಜಣ್ಣ ನೀಡಿದ ಹೇಳಿಕೆಯನ್ನು ಬಿಜೆಪಿ ರಾಷ್ಟ್ರವ್ಯಾಪಿ ಅಸ್ತ್ರವಾಗಿ ಬಳಸಿಕೊಂಡಿತು.

ಇಂಡಿಯಾ ಒಕ್ಕೂಟ
ಒಡಕು ಮೂಡಿದ್ದ ಇಂಡಿಯಾ ಒಕ್ಕೂಟವನ್ನು ಮತಗಳ್ಳತನ ವಿಷಯ ಪ್ರಸ್ತಾಪಿಸುವ ಮೂಲಕ ಒಗ್ಗೂಡಿಸಲು ರಾಹುಲ್ ಮುಂದಾಳತ್ವ ವಹಿಸಿ ಸಂಸತ್ ಮುಂದೆ ಪ್ರತಿಭಟನೆ ಮಾಡಿ ಯಶಸ್ವಿಯಾಗಿದ್ದರು.
ಈ ವೇಳೆಯೇ ತೃಣಮೂಲ ಕಾಂಗ್ರೆಸ್‌ನ ಕೆಲವು ಸಂಸದರು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವರೊಬ್ಬರು ನೀಡಿದ ಹೇಳಿಕೆಯನ್ನು ಬಿಜೆಪಿ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ರಾಹುಲ್ ಗಮನಕ್ಕೆ ತಂದರು.
ಅಷ್ಟರೊಳಗೆ ರಾಜಣ್ಣ ವಿರುದ್ಧ ಕ್ರಮಕ್ಕೆ ಖರ್ಗೆ ಹಾಗೂ ವೇಣುಗೋಪಾಲ್ ನಿರ್ಧರಿಸಿ, ರಾಹುಲ್ ಗಮನಕ್ಕೆ ತಂದಾಗ, ಮೊದಲು ಆ ಸಚಿವರನ್ನು ವಜಾ ಮಾಡಿಸಿ, ಕೆಪಿಸಿಸಿಗೂ ಎಚ್ಚರಿಕೆ ನೀಡಿ ಎಂಬ ಸಂದೇಶ ರವಾನಿಸಿದರು.
ಮನವೊಲಿಕೆಗೆ ಹರಸಾಹಸ
ರಾಹುಲ್ ಸಂದೇಶ ಮತ್ತು ಎಐಸಿಸಿ ಪತ್ರ ಮುಖ್ಯಮಂತ್ರಿಗೆ ತಲುಪಿತಾದರೂ, ರಾಜಣ್ಣ ಅವರನ್ನು ಸಂಪುಟದಲ್ಲೇ ಉಳಿಸಿಕೊಳ್ಳಲು ವರಿಷ್ಠರ ಮನವೊಲಿಕೆಗೆ ಹರಸಾಹಸ ಮಾಡಿದರು.
ವೇಣುಗೋಪಾಲ್ ಅವರನ್ನು ಸಂಪರ್ಕಿಸಿದಾಗಲೂ ಮುಖ್ಯಮಂತ್ರಿ ಮಾತಿಗೆ ಬೆಲೆ ಸಿಗದೆ, ರಾಹುಲ್ ಜೊತೆಯೇ ದೂರವಾಣಿ ಮೂಲಕ ಮಾತನಾಡಿದಾಗಲೂ, ಸಚಿವರ ರಾಜೀನಾಮೆ ಪಡೆಯಬೇಡಿ, ಮೊದಲು ಸಂಪುಟದಿಂದ ಹೊರಹಾಕಿ ಎಂಬ ಕಠಿಣ ಆದೇಶ ಬಂದಿತು.
ಮುಂದೆ, ಪಕ್ಷ ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿದ್ದರಾಮಯ್ಯ ಅವರಿಗೆ ನೇರವಾಗಿ ಸೂಚಿಸಲಾಯಿತು.
ಈ ಬೆಳವಣಿಗೆ ನಂತರ, ರಾಜಣ್ಣ ರಾಜೀನಾಮೆ ಪತ್ರ ನೀಡಿದ್ದರೂ ಅದನ್ನು ಸ್ವೀಕರಿಸಿದೆ, ಸಂಪುಟದಿಂದ ತಕ್ಷಣ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಯಿತು.


