ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವೇಳೆ ಒಕ್ಕಲಿಗ ಜನಾಂಗದವರು ’ಒಕ್ಕಲಿಗ’ ಎಂದೇ ನಮೂದಿಸುವಂತೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಸಮೀಕ್ಷೆಯ ಜಾತಿ ಕಾಲಂನಲ್ಲಿ ’ಒಕ್ಕಲಿಗ’ ಎಂದೇ ನಮೂದಿಸಬೇಕು, ಉಪಜಾತಿ ಕಾಲಂನಲ್ಲಿ ಉಪಪಂಗಡದ ಬಗ್ಗೆ ಅಗತ್ಯ ಕಂಡರೆ ಮಾಹಿತಿ ನೀಡಿ, ಇಲ್ಲವಾದರೆ, ಒಕ್ಕೊರಲಿನಿಂದ ’ಒಕ್ಕಲಿಗ’ ಎಂದೇ ನಮೂದಿಸಿ.
ನಿಖರ ಮಾಹಿತಿ ನೀಡಿ
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನಿಖರವಾದ ಮಾಹಿತಿ ನೀಡಿದರೆ ಮುಂದೆ, ಸಮಾಜ ಮತ್ತು ಮಕ್ಕಳು ಭವಿಷ್ಯದಲ್ಲಿ ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ಮೀಸಲಾತಿ ವಿಷಯದಲ್ಲಿ ಜಾತಿ ಗಣತಿ ಪ್ರಮುಖ ಪಾತ್ರ ವಹಿಸಲಿದೆ, ಹೀಗಾಗಿ, ಪ್ರತಿಯೊಬ್ಬರೂ ಗಣತಿಯಲ್ಲಿ ಪಾಲ್ಗೊಳ್ಳಬೇಕು, ಯಾವುದೇ ಗೊಂದಲಕ್ಕೆ ಒಳಗಾಗದೆ ನೈಜ ಮಾಹಿತಿ ನೀಡಿ.
ಇರುವ ಆಸ್ತಿಗಿಂತ ದುಪ್ಪಟ್ಟು ಹೇಳುವುದು, ವ್ಯಾಸಂಗ ಮಾಡಿಲ್ಲದ್ದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ದಾಖಲಿಸುವ ಕೆಲಸ ಮಾಡಬೇಡಿ.

ಹೆಚ್ಚುಗಾರಿಕೆ ಬೇಡ
ಸಮೀಕ್ಷೆ ವೇಳೆ ಹೆಚ್ಚುಗಾರಿಕೆ ತೋರ್ಪಡಿಸಿಕೊಳ್ಳುವ ಕೆಲಸ ಆಗಬಾರದು, ನೈಜ ಮಾಹಿತಿ ನೀಡಿದರೆ, ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಾಗಲಿದೆ.
ಒಕ್ಕಲಿಗ ಸಮುದಾಯದಲ್ಲಿ ಬಹುಪಾಲು ಮಂದಿ ಬಡವರಿದ್ದಾರೆ, ಅವರಿಗೆ ಸರ್ಕಾರದಿಂದ ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಇತರೆ ಸವಲತ್ತುಗಳು ದೊರೆಯಬೇಕಾದರೆ ಸಮೀಕ್ಷೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿ.
ಹಿಂದಿನ ಸಮೀಕ್ಷೆ ಸಂದರ್ಭಗಳಲ್ಲಿ ಸಮಾಜ ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಸವಲತ್ತುಗಳನ್ನು ಪಡೆಯುತ್ತಿದ್ದೀರಿ, ರೈತರ ಮಕ್ಕಳು ಮತ್ತು ಬಡವರಿಗೆ ಮತ್ತಷ್ಟು ಸೌಲಭ್ಯ ದೊರೆಯಬೇಕಾದರೆ ನಿಮ್ಮ ಒಗ್ಗಟ್ಟನ್ನು ತೋರಿಸುವ ಸಮಯ ಬಂದಿದೆ.
ಆಸ್ತಿ ವಿಭಜಿಸಿ ಮಾಹಿತಿ ನೀಡಿ
ನಿಮ್ಮ ಬಳಿ 20 ಎಕರೆ ಜಮೀನಿದ್ದು 10 ಮಂದಿ ವಾರಸುದಾರರಿದ್ದರೆ, ಅಂತಹ ಸನ್ನಿವೇಶದಲ್ಲಿ ಜಮೀನು ಮತ್ತು ಇತರ ಆಸ್ತಿಯನ್ನು ವಿಭಜಿಸಿ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದ್ದಾರೆ.
ಕಾಂತರಾಜ್ ಹಾಗೂ ಜಯಪ್ರಕಾಶ್ ಹೆಗಡೆ ವರದಿಯನ್ನು ತಿರಸ್ಕರಿಸುವಲ್ಲಿ ತೆರೆಮರೆಯ ಪಾತ್ರ ವಹಿಸಿದ್ದ ಸ್ವಾಮೀಜಿ, ಇದೀಗ ಕಳೆದ 3 ತಿಂಗಳಿಂದ ಸಮುದಾಯವನ್ನು ಒಗ್ಗೂಡಿಸಲು ನಿರಂತರ ಸಭೆಗಳನ್ನು ನಡೆಸುತ್ತಾ ಬಂದಿದ್ದಾರೆ.
ನಿವೃತ್ತ ಅಧಿಕಾರಿಗಳು ಚಿಂತಕರು ಹಾಗೂ ಕಾನೂನು ತಜ್ಞರೊಂದಿಗೆ ಹಲವು ಸಭೆಗಳನ್ನು ಮಾಡಿ, ಅವರುಗಳ ಅಭಿಪ್ರಾಯ ಸಂಗ್ರಹಿಸಿದ ನಂತರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸ್ವಯಂ ಪ್ರೇರಿತವಾಗಿ ಸಮಾಜದ ವಿವಿಧ ಸಂಘಟನೆಗಳ ಮುಖಂಡರ ಸಭೆ ಕರೆದು ಸಮುದಾಯಕ್ಕೆ ಸಮೀಕ್ಷೆಯ ಮಹತ್ವ ತಿಳಿಸಿ, ’ಒಕ್ಕಲಿಗ’ ಎಂದೇ ನಮೂದಿಸುವಂತೆ ಹಾಗೂ ಈ ಮಾಹಿತಿಯನ್ನು ಪ್ರತಿ ಮನೆಗೆ ತಲುಪಿಸುವಂತೆ ಕರೆ ನೀಡಿದ್ದಾರೆ.

ಜಾತಿ, ಉಪಜಾತಿ ಕಾಲಂ
ಸಮೀಕ್ಷೆದಾರರು ಮನೆಗೆ ಬಂದಾಗ, (9) ಜಾತಿ, A-1541-ಒಕ್ಕಲಿಗ, (10) ಉಪಜಾತಿ ಎಂದಿರುವ ಕಡೆಯೂ ’ಒಕ್ಕಲಿಗ’ ಎಂದೇ ನಮೂದಿಸುವಂತೆ ಕರೆ ಕೊಟ್ಟಿದ್ದಾರೆ.
ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಹಾಲಕ್ಕಿಗೌಡರ ಸಮುದಾಯ ಹಾಗೂ ಕೊಡಗಿನ ಅರೆಭಾಷೆ ಗೌಡರು ಕೂಡ ಸಮೀಕ್ಷೆ ಸಂದರ್ಭದಲ್ಲಿ ಇದೇ ನಮೂನೆ ಬಳಸುವಂತೆ ತಿಳಿಸಿದ್ದಾರೆ.
ಸ್ವಾಮೀಜಿ ಕೈಗೊಂಡಿರುವ ಈ ಕಾರ್ಯದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಮತ್ತು ಪದಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

