ಬೆಂಗಳೂರು:ಮುಂದೆ ಎದುರಾಗಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಲು ಇಂದಿಲ್ಲಿ ನಿರ್ಧರಿಸಿರುವ ರಾಜ್ಯ ಬಿಜೆಪಿ, ಈ ಕದನಕ್ಕೆ ಧರ್ಮಾಸ್ತ್ರ ಬಳಸಲಿದೆ.
ಜಿಲ್ಲಾ, ತಾಲ್ಲೂಕು ಪಂಚಾಯತ್‌ಗಳಲ್ಲದೆ, ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಆಡಳಿತಾರೂಢ ಕಾಂಗ್ರೆಸ್ ವೇದಿಕೆ ಸಿದ್ಧಪಡಿಸಿರುವ ಬೆನ್ನಲ್ಲೇ ಬಿಜೆಪಿ ಕೂಡಾ ಇಂದು ತಂತ್ರಗಾರಿಕೆ ರೂಪಿಸಿದೆ.
ರಾಜಕೀಯ ಚಿಂತನಾ ಶಿಬಿರ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ ರಾಜಕೀಯ ಚಿಂತನಾ ಶಿಬಿರದಲ್ಲಿ ಕೆಲವು ಮಹತ್ವದ ತೀರ್ಮಾನ ಕೈಗೊಂಡಿದೆ.
ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಹಾಲಿ ಸದಸ್ಯರು ಪಕ್ಷದ ವಿವಿಧ ಸಂಘಟನೆಗಳ ಅಧ್ಯಕ್ಷರು ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಜನ ವಿರೋಧಿ ನೀತಿ ಮತ್ತು ಧರ್ಮ ವಿಭಜಿಸಿ ರಾಜಕೀಯ ಮಾಡಲು ಹೊರಟಿರುವ ಕುತಂತ್ರದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದೆ.
ಹಿಂದೂಗಳನ್ನು ಕ್ರೈಸ್ತ ಸಮುದಾಯಕ್ಕೆ ಬಲವಂತವಾಗಿ ಮತಾಂತರಿಸಲು ಹೊರಟಿರುವ ಸಿದ್ದರಾಮಯ್ಯ ಕುತಂತ್ರವನ್ನು ರಾಜ್ಯದ ಜನತೆ ಮುಂದಿಡಬೇಕು.
ಜಾತಿ ಗಣತಿ ಹೆಸರಿನಲ್ಲಿ ವಿಭಜನೆ
ಜಾತಿ ಗಣತಿ ಹೆಸರಿನಲ್ಲಿ ಸಮುದಾಯಗಳನ್ನು ವಿಭಜನೆ ಮಾಡಿ ಅಲ್ಪಸಂಖ್ಯಾತರನ್ನು ಮುನ್ನೆಲೆಗೆ ತರಲು ಈ ಸರ್ಕಾರ ಹೊರಟಿದೆ.
ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಸಂವಿಧಾನ ಆಶೋತ್ತರಗಳ ವಿರುದ್ಧವಾಗಿದೆ.
ಆದರೆ, ಕಾಂಗ್ರೆಸ್ ಸರ್ಕಾರದ ಜನಗಣತಿಯಲ್ಲಿ ಈ ಸಮುದಾಯಗಳಲ್ಲದೆ, ಉದ್ದೇಶಪೂರ್ವಕವಾಗಿ ’ಇತರೆ’ ಎಂಬ ಕಾಲಂ ಕೊಡುವ ಮೂಲಕ ಹಿಂದೂಗಳನ್ನು ಕ್ರೈಸ್ತ ಸಮುದಾಯಕ್ಕೆ ಬಲವಂತವಾಗಿ ಸೇರಿಸಲು ಇಟ್ಟಿರುವ ಹೆಜ್ಜೆಯಾಗಿದೆ.
ಪ್ರಮುಖ ಜಾತಿಗಳ ವಿಭಜನೆ
ಅಲ್ಲದೆ, ಒಕ್ಕಲಿಗ, ಲಿಂಗಾಯತ ಸೇರಿದಂತೆ ಪ್ರಮುಖ ಜಾತಿಗಳನ್ನು ವಿಭಜಿಸಿ ಒಳಪಂಗಡಗಳನ್ನೂ ಅಳವಡಿಸುವ ಮೂಲಕ ಅವುಗಳ ಒಟ್ಟಾರೆ ಸಂಖ್ಯಾಬಲವನ್ನು ಕಡಿಮೆ ಮಾಡಲು ಹೊರಟಿದೆ.
ಮುಂದೆ ಎದುರಾಗುವ ಚುನಾವಣೆಯಲ್ಲಿ ಈ ಸರ್ಕಾರದಲ್ಲಿ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳಿಗಿಂತ ಜಾತಿ ಅಸ್ತ್ರವನ್ನೇ ಬಳಸಿಕೊಂಡು ಹೋರಾಟ ಮಾಡಬೇಕು.
ಜಾತಿ ಗಣತಿ ಹೆಸರಿನಲ್ಲಿ ಇವರು ಮಾಡುತ್ತಿರುವ ಕುತಂತ್ರವನ್ನು ಜನತೆ ಮುಂದಿಡುವ ನಿರ್ಧಾರವನ್ನು ಸಭೆ ಕೈಗೊಂಡಿದೆ.
ವಿರೋಧಿ ಹೋರಾಟ
ಈ ಜಾತಿ ಗಣತಿಯನ್ನೇ ನಾವು ವಿರೋಧಿಸೋಣ, ಇದರ ಜೊತೆ ಜೊತೆಗೆ ನಮ್ಮ ಹೋರಾಟವೂ ಮುಂದುವರೆಯಬೇಕು.
ಸರ್ಕಾರ ತೆಗೆದುಕೊಂಡಿರುವ ಈ ದ್ವಂದ್ವ ನಿಲುವುಗಳನ್ನು ಜನಸಾಮಾನ್ಯರಿಗೆ ತಿಳಿಸಿ, ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡುವ ಮೂಲಕವೇ ನಾವು ಚುನಾವಣಾ ಹೋರಾಟ ನಡೆಸೋಣ.
ವಿಭಜನೆಗೊಂಡಿರುವ ಬೆಂಗಳೂರು ಮಹಾನಗರ ಪಾಲಿಕೆ ಜೊತೆಗೆ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಢ ಹಾಗೂ ಶಿವಮೊಗ್ಗ ಪಾಲಿಕೆಗಳಿಗೆ ಚುನಾವಣೆ ಎದುರಾಗಲಿದೆ.
ಪೂರ್ವ ಸಿದ್ಧತೆ
ಇದಲ್ಲದೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಂಡಿದೆ.
ಈ ಎಲ್ಲಾ ಚುವಾಣೆಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೋರಾಟ ಮಾಡುವ ತೀರ್ಮಾನವನ್ನು ಕೈಗೊಂಡಿದೆ.

