ಬೆಂಗಳೂರು:ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ಯಾವುದೇ ದೇವಾಲಯಗಳನ್ನು ಮುಕ್ತಗೊಳಿಸುವುದಿಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಾದ್ಯಂತ ಹೊಸ ಕಾನೂನು ತಂದು ಇಲಾಖೆ ವ್ಯಾಪ್ತಿಯಿಂದ ದೇವಾಲಯಗಳನ್ನು ಹೊರಗಿಡುವ ಕೆಲಸ ಮಾಡಲಿ ಎಂದರು.
ಕುಂಟುಂಬಗಳ ಮಧ್ಯೆ ವಿವಾದ
ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆ ಇರಲಿಲ್ಲ, ಅನುವಂಶಿಕವಾಗಿ ನಡೆದು ಬರುತ್ತಿತ್ತು, ಆ ಸಂದರ್ಭದಲ್ಲಿ ಕಿತ್ತಾಟಗಳು ನಡೆದು ಪೂಜೆ ಮಾಡುವ ಕುಂಟುಂಬಗಳ ಮಧ್ಯೆ ವಿವಾದ ಉಂಟಾಗುತ್ತಿತ್ತು.
ಈ ಗೊಂದಲದಿಂದ ಬಹಳಷ್ಟು ದೇಗುಲಗಳಿಗೆ ತೊಂದರೆ ಎದುರಾಗಿತ್ತು, ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಜರಾಯಿ ಇಲಾಖೆ ವ್ಯಾಪ್ತಿಗೆ ದೇವಾಲಯಗಳನ್ನು ತರಲಾಯಿತು.
ವಿಶ್ವ ಹಿಂದೂ ಪರಿಷತ್ ಯಾವ ಉದ್ದೇಶಕ್ಕಾಗಿ ಮುಜರಾಯಿ ವ್ಯಾಪ್ತಿಯಿಂದ ದೇವಾಲಯಗಳನ್ನು ಹೊರಗಿಡಬೇಕೆಂಬ ಹೋರಾಟ ನಡೆಸುತ್ತಿದೆಯೋ ತಿಳಿಯದು, ಆದರೆ, ನಾವು ಮಾತ್ರ ಇಲಾಖಾ ವ್ಯಾಪ್ತಿ ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದರು.
’ಸಿ’ ಗ್ರೇಡ್ ದೇಗುಲಗಳಿಗೆ ಹಣ
ಮುಜರಾಯಿ ಇಲಾಖೆ ಅರ್ಚಕರಿಗೆ 10 ಲಕ್ಷ ರೂ. ವಿಮೆ, ಅವರ ಮಕ್ಕಳಿಗೆ ಶಿಕ್ಷಣ, ’ಸಿ’ ಗ್ರೇಡ್ ದೇಗುಲಗಳಿಗೆ ಹಣ ನೀಡುವ ಚಿಂತನೆ ಇತ್ತು.
ಇದಕ್ಕಾಗಿ ಮಸೂದೆ ತರಲು ಮುಂದಾದಾಗ ಬಿಜೆಪಿ ವಿರೋಧಿಸಿತ್ತು, ನಾವು ಅದನ್ನು ಹಾಗೇ ಬಿಟ್ಟೆವು, ಅವರು ಮಾಡಲ್ಲ, ನಾವು ಮಾಡಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳ ಕ್ಷೇತ್ರವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಉದ್ದೇಶವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಆಡಳಿತದ ರಸ್ತೆ ಗುಂಡಿ
ರಸ್ತೆ ಗುಂಡಿಗಳ ಬಗ್ಗೆ ಪ್ರಸ್ತಾಪಿಸಿದ ರಾಮಲಿಂಗಾ ರೆಡ್ಡಿ, ಬಿಜೆಪಿ ಆಡಳಿತದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದರೆ, ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
ಅವರು ಅಧಿಕಾರದಲ್ಲಿದ್ದ ವೇಳೆ ಪಕ್ಷದ ಶಾಸಕರಿಗೆ ಸಾವಿರಾರು ಕೋಟಿ ರೂ. ನೀಡಿದರೂ ಗುಣಮಟ್ಟದ ಕೆಲಸ ಆಗಲಿಲ್ಲ.
ಬಿಜೆಪಿ ಆಡಳಿತದಲ್ಲೇ ಗುಂಡಿಗಳಿಂದ ಅಪಘಾತಗಳಾಗಿ 17 ಮಂದಿ ಮೃತಪಟ್ಟರು, ಈ ಸಂದರ್ಭದಲ್ಲಿ ಹೈಕೋರ್ಟ್ ಮಧ್ಯೆಪ್ರವೇಶಿಸುವ ಸ್ಥಿತಿ ಎದುರಾಯಿತು.
ಈಗ ಅಂತಹ ಪರಿಸ್ಥಿತಿ ಇಲ್ಲ, ಮಳೆಗಾಲ ಎಂದ ಮೇಲೆ ಗುಂಡಿಗಳಾಗುತ್ತವೆ, ಅವುಗಳನ್ನು ಮುಚ್ಚುವ ಕೆಲಸವೂ ಒಂದೆಡೆಯಿಂದ ನಡೆಯುತ್ತಿದೆ ಎಂದು ರೆಡ್ಡಿ ತಿಳಿಸಿದರು.

