ಬೆಂಗಳೂರು:ಅಧಿಕಾರ ಹಸ್ತಾಂತರ, ಸಚಿವ ಸಂಪುಟ ಪುನರ್ ರಚನೆ ವಿಚಾರ ಮುಂದಿಟ್ಟುಕೊಂಡು ಸರ್ಕಾರ ಮತ್ತು ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ನೀಡಿದ್ದಾರೆ.
ಕಡೆಗಳಿಗೆಯಲ್ಲಿ ಕೊಡಗು ಜಿಲ್ಲಾ ಪ್ರವಾಸ ರದ್ದುಪಡಿಸಿ, ಶುಕ್ರವಾರ ರಾತ್ರಿ ಖರ್ಗೆ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮುಖಾಮುಖಿ ಚರ್ಚೆ ಮಾಡಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರ
ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ, ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅಲ್ಲದೆ, ಆಪ್ತ ಸಚಿವರುಗಳು ಈ ಸಂಬಂಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ವರಿಷ್ಠರ ಆದೇಶದ ನಂತರವೂ ಈ ಮಾತುಗಳು ಕೇಳಿಬರುತ್ತಲೇ ಇವೆ, ಅಲ್ಲದೆ, ಈಗ ಸಂಪುಟ ಪುನರ್ ರಚನೆಯನ್ನು ಸಿದ್ದರಾಮಯ್ಯ ಬೆಂಬಲಿಗರು ಮುನ್ನೆಲೆಗೆ ತರುತ್ತಿದ್ದಾರೆ, ಪುನರ್ ರಚನೆಗೆ ನೀವು ಅನುಮತಿ ನೀಡಿದ್ದೀರಾ, ಸ್ಪಷ್ಟನೆ ಕೊಡಿ ಎಂದು ಮನವಿ ಮಾಡಿದ್ದಾರೆ.
ನನ್ನನ್ನು ಬೆಂಬಲಿಸಿ ಯಾರಾದರೂ ಶಾಸಕರು ಸಾರ್ವಜನಿಕವಾಗಿ ಹೇಳಿಕೆ ನೀಡಿದರೆ, ಅವರಿಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡುತ್ತದೆ, ಆದರೆ, ಮುಖ್ಯಮಂತ್ರಿ ಪರವಾಗಿ ನೀಡುವ ಹೇಳಿಕೆಗಳಿಗೆ ಇದುವರೆಗೂ ಯಾರಿಗೂ ನೋಟಿಸ್ ಜಾರಿ ಮಾಡಿಲ್ಲ, ಇದು ಸರಿಯೇ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆಯನ್ನು ಬೆಂಬಲಿಸಲಿಲ್ಲ
ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ವಿರುದ್ಧ ನೀಡಿದ ಹೇಳಿಕೆ ನಂತರದ ಬೆಳವಣಿಗೆಯಿಂದ ಅವರಿಗೆ ಬೆದರಿಕೆ ಕರೆಯೂ ಬಂದಿತ್ತು, ನನ್ನನ್ನು ಹೊರತುಪಡಿಸಿ ಗೃಹ ಮಂತ್ರಿಯೂ ಸೇರಿದಂತೆ ಯಾವ ಸಚಿವರೂ ಅವರ ಬೆನ್ನಿಗೆ ನಿಲ್ಲಲಿಲ್ಲ.
ನಿಮ್ಮ ಕುಟುಂಬದ ಬಗ್ಗೆಯೂ ಅವಹೇಳಿನಕಾರಿ ಹೇಳಿಕೆಗಳು ಬಂದರೂ ಪ್ರತಿಭಟಿಸಿ ಹೇಳಿಕೆ ನೀಡಲಿಲ್ಲ ಎಂದರು.
ಇತ್ತೀಚಿನ ಎಲ್ಲಾ ಬೆಳವಣಿಗೆ, ಪಕ್ಷ ಹಾಗೂ ಸರ್ಕಾರದ ಕೆಲಸ, ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಶಿವಕುಮಾರ್, ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವರಿಷ್ಠರು ನೀಡಿರುವ ಭರವಸೆಯನ್ನು ಖರ್ಗೆ ಗಮನಕ್ಕೆ ತಂದಿದ್ದಾರೆ.
ನವೆಂಬರ್ 14 ರವರೆಗೆ ಸುಮ್ಮನಿರಿ
ಎಲ್ಲವನ್ನೂ ಆಲಿಸಿದ ಖರ್ಗೆ, ಕೆಲವು ಸಲಹೆ, ಸೂಚನೆ ನೀಡಿ, ನವೆಂಬರ್ 14 ರವರೆಗೆ ನಿಮ್ಮ ಕೆಲಸ ಮಾಡಿಕೊಂಡು ಹೋಗಿ, ನಂತರ ಪಕ್ಷ ಗಮನಿಸಲಿದೆ ಎಂದಿದ್ದಾರೆ.
ಆರೋಗ್ಯ ಹಿತದೃಷ್ಟಿಯಿಂದ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತಾವು ತೀವ್ರವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂಬುದಾಗಿ ಖರ್ಗೆ ತಿಳಿಸಿದ್ದಲ್ಲದೆ, ಚುನಾವಣಾ ಸಂಬಂಧಿ ವಿವರ ಹಂಚಿಕೊಂಡರು.
ಖರ್ಗೆ ಭೇಟಿ ನಂತರ ಟ್ವೀಟ್ ಮಾಡಿರುವ ಶಿವಕುಮಾರ್, ಎಐಸಿಸಿ ಅಧ್ಯಕ್ಷರೂ ಆಗಿರುವ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ ಎಂದು ಬರೆದುಕೊಂಡಿದ್ದಾರೆ.

