ಬೆಂಗಳೂರು:ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ’ಐ ವಿಶ್ ಹಿಮ್ ಆಲ್ ದಿ ಬೆಸ್ಟ್’ (ಅವರಿಗೆ ಶುಭ ಕೋರುತ್ತೇನೆ) ಎಂದು ವ್ಯಂಗ್ಯಭರಿತ ಮಾತುಗಳನ್ನಾಡಿದ್ದಾರೆ.
ಮೈಸೂರಿನಲ್ಲಿ ಮುಖ್ಯಮಂತ್ರಿ ಈ ಹೇಳಿಕೆ ನೀಡುತ್ತಿದ್ದಂತೆ ಶಿವಕುಮಾರ್ ತಮ್ಮ ನಿವಾಸದ ಬಳಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗೆ ಶುಭಾಶಯ ಹೇಳಿದ್ದಲ್ಲದೆ, ಅವರು ತಮ್ಮ ವಿಚಾರಧಾರೆ ತಿಳಿಸಿದ್ದಾರೆ, ಆ ಬಗ್ಗೆ ನಾನು ಮಾತನಾಡುವುದಿಲ್ಲ.
ನಾನುಂಟು, ಹೈಕಮಾಂಡ್ ಉಂಟು
ನಾನುಂಟು, ಹೈಕಮಾಂಡ್ ಉಂಟು, ಅವರು ಹೇಳಿದಂತೆ ಕೇಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ, ನಾನೂ ಹೇಳಿದ್ದೇನೆ, ಅದಕ್ಕೆ ನಾವೂ ಬದ್ಧ, ಅಷ್ಟು ಬಿಟ್ಟರೆ ಬೇರೆ ಏನೂ ಇಲ್ಲ ಎಂದರು.
ಕಳೆದ ಎರಡೂವರೆ ವರ್ಷಗಳಿಂದ ಡಿನ್ನರ್ ಸಭೆಗಳು ನಡೆಯುತ್ತಲೇ ಬಂದಿವೆ, ಆ ಡಿನ್ನರ್ ಸಭೆಗಳ ಬಗ್ಗೆ ಗೊತ್ತಿಲ್ಲ, ನಾಲ್ಕೈದು ಡಿಸಿಎಂ ಮಾಡಬೇಕು, ಅಧ್ಯಕ್ಷರ ಬದಲಾವಣೆ ಮಾಡುವಂತೆ ನಿರಂತರವಾಗಿ ಸಭೆಗಳನ್ನು ಮಾಡಿಕೊಂಡೇ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ನನ್ನ ಬಳಿ ಯಾವ ಬಣವೂ ಇಲ್ಲ, ನಾನು ಯಾವುದೇ ಬಣದ ನಾಯಕನಲ್ಲ, ನಾನು 140 ಶಾಸಕರ ಅಧ್ಯಕ್ಷ, 140 ಶಾಸಕರೂ ನನಗೆ ಮುಖ್ಯ, ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ.
ನಾನು ಗುಂಪುಗಾರಿಕೆ ಮಾಡುವುದಿಲ್ಲ
ಯಾವ ಗುಂಪನ್ನೂ ದೆಹಲಿಗೆ ಕರೆದುಕೊಂಡು ಹೋಗಲು ನನಗೆ ಇಚ್ಛೆ ಇಲ್ಲ, ನಾನು ಗುಂಪುಗಾರಿಕೆ ಮಾಡುವುದಿಲ್ಲ, ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ, ಹೀಗಾಗಿ ಮಂತ್ರಿ ಸ್ಥಾನದ ಆಕಾಂಕ್ಷೆ ಇರುವವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗುವುದು ಸಹಜ.
ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಹಕ್ಕು ಅವರಿಗೆ ಇದೆ, ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ, ಕೆಲವರು ಮುಖ್ಯಮಂತ್ರಿಗಳ ಜೊತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರೆ, ಮತ್ತೆ ಕೆಲವರು ತಾವಾಗಿಯೇ ಹೋಗಿದ್ದಾರೆ, ಇದರಲ್ಲಿ ತಪ್ಪೇನಿದೆ, ನಾವು ಯಾರನ್ನೂ ತಡೆಯಲು ಸಾಧ್ಯವಿಲ್ಲ.
ಒಂದು ಪಕ್ಷದ ಶಾಸಕರು ಮಂತ್ರಿ, ಮುಖ್ಯಮಂತ್ರಿ ಆಗಲು ಅರ್ಹರಿರುತ್ತಾರೆ, ಐದು ವರ್ಷ ತಾವೇ ಸಿಎಂ ಆಗಿರುವುದಾಗಿ ಮುಖ್ಯಮಂತ್ರಿಯೂ ಹೇಳಿದ್ದಾರೆ ಎಂದರು.

