ನವದೆಹಲಿ:ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.
ದೆಹಲಿಯ ರಾಜಾಜಿ ಮಾರ್ಗದ ನಂಬರ್ 10ರಲ್ಲಿನ ಖರ್ಗೆ ನಿವಾಸಕ್ಕೆ ಧಾವಿಸಿದ ರಾಹುಲ್, ಸುಮಾರು 90 ನಿಮಿಷ ಸಮಾಲೋಚನೆ ನಡೆಸಿದರು.
ವರಿಷ್ಠರ ಸಮಾಲೋಚನೆ
ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಚರ್ಚೆ ಮುಗಿಯುತ್ತಿದ್ದಂತೆ ದೆಹಲಿಯಲ್ಲಿ ವರಿಷ್ಠರು ಸಮಾಲೋಚಿಸಿದ್ದಾರೆ.
ಉನ್ನತ ಮೂಲಗಳ ಪ್ರಕಾರ, ಮೊದಲು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಚರ್ಚಿಸಿದ ನಂತರ ಉಭಯ ನಾಯಕರು ಕರ್ನಾಟಕ ವಿಷಯ ಕುರಿತು ಕೆಲವು ತೀರ್ಮಾನ ಕೈಗೊಂಡರು ಎನ್ನಲಾಗಿದೆ.
ಇದಕ್ಕೂ ಮುನ್ನ ದೆಹಲಿಗೆ ಕರೆಸಿಕೊಂಡಿದ್ದ ಪ್ರಿಯಾಂಕ್ ಖರ್ಗೆ ಮತ್ತು ಶರತ್ ಬಚ್ಚೇಗೌಡ ಜೊತೆ ರಾಹುಲ್ ಖಾಸಗಿಯಾಗಿ ಚರ್ಚಿಸಿದರು ಎನ್ನಲಾಗಿದೆ.
ನಾಳೆ ಸೋನಿಯಾ ಸಮ್ಮುಖದಲ್ಲಿ ತೀರ್ಮಾನ
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನಡುವಿನ ಚರ್ಚೆ ವಿವರಗಳು ತಿಳಿದುಬಂದಿಲ್ಲ, ಆದರೆ, ನಾಳೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ನಡೆಯುವ ಸಂಸದೀಯ ಮಂಡಳಿಯಲ್ಲಿ ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆ ಸಮಾಲೋಚಿಸಿದರು ಎನ್ನಲಾಗಿದೆ.
ಇವರ ಮಾತುಕತೆ ಪೂರ್ಣಗೊಳ್ಳುವವರೆಗೂ ಪ್ರಿಯಾಂಕ್, ಶರತ್ ಸೇರಿದಂತೆ ಕರ್ನಾಟಕದ ಐವರು ಮುಖಂಡರು ಮನೆಯ ಹುಲ್ಲುಹಾಸಿನ ಅಂಗಳದಲ್ಲಿದ್ದರು.

