ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ
ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ನಾನಾ ಅಪರಾಧಗಳಲ್ಲಿ ನಮ್ಮ ರಾಜ್ಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿರುವುದು ಆತಂಕಕ್ಕಾರಿ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೋರಮಂಗಲದ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಪದಕ” ಪ್ರದಾನ ಮಾಡಿ ಮಾತನಾಡಿದ ಅವರು, ಯಾವುದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಯ ಗಮನಕ್ಕೆ ಬರದಂತೆ ಯಾವುದೇ ಅಪರಾಧಗಳು, ಕೆಟ್ಟ ವ್ಯವಹಾರಗಳು ನಡೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ ಎಂದರು.
ಹೆಚ್ಚಾಗಿರುವ ಅಪರಾಧಗಳ ನಿಯಂತ್ರಣದಲ್ಲೂ ಪೊಲೀಸರು ಭಾರಿ ಶ್ರಮ ಹಾಕಬೇಕಿದೆ. ಸೈಬರ್ ಅಪರಾಧಗಳು ಸೇರಿದಂತೆ ನಾನಾ ರೀತಿಯ ಅಪರಾಧಗಳನ್ನು ತಡೆಯಲು ತಂತ್ರಜ್ಞಾನದ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಯದ ಮಿತಿ ಇಲ್ಲದಂತೆ ದಿನದ 24 ಗಂಟೆಯೂ ಕರ್ತವ್ಯಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಿದೆ. ಮಹಿಳೆಯರು, ಮಕ್ಕಳು ಮತ್ತು ದುರ್ಬಲರು ಹಾಗೂ ಅಸಹಾಯಕರ ನಮ್ಮ ಸರ್ಕಾರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದೆ. ಪೊಲೀಸರೂ ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.
ರಾಜ್ಯದ ಆರ್ಥಿಕ ಬೆಳವಣಿಗೆಗೂ, ಜಿಡಿಪಿ ಪ್ರಗತಿಗೂ ರಾಜ್ಯದ ಕಾನೂನು ಸುವ್ಯವಸ್ಥೆಗೂ ನೇರಾ ನೇರಾ ಸಂಬಂಧ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.
ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಆಗಬೇಕು ಎನ್ನುವ ಗುರಿ ನಮ್ಮ ಸರ್ಕಾರದ್ದಾಗಿದೆ. ಇದು ಪೊಲೀಸ್ ಇಲಾಖೆಯ ಗುರಿಯೂ ಆಗಬೇಕಿದೆ ಎಂದರು.
ನ್ಯಾಯ ನೀಡುವುದರಲ್ಲಿ ಕರ್ನಾಟಕ ಮೊದಲ ಸ್ಥಾನ : ಪರಮೇಶ್ವರ್
ಮುಖ್ಯಮಂತ್ರಿಗಳ ಭಾಷಣಕ್ಕೂ ಮುನ್ನ ಮಾತನಾಡಿದ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ಕೊಂಡಾಡಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಉತ್ತಮವಾದ ಪೊಲೀಸ್ ವ್ಯವಸ್ಥೆ ಎಂಬ ಬಿರುದಿಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದ್ದರು.
ರಾಜ್ಯದಲ್ಲಿ ಶಾಂತಿ, ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಶ್ರಮ ಪಡುತ್ತಿದ್ದಾರೆ. ಅದರಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯಾ ಜಸ್ಟೀಸ್ ವರದಿ ಪ್ರಕಾರ ದೇಶದಲ್ಲಿ ನೊಂದವರಿಗೆ ನ್ಯಾಯ ನೀಡುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂಬ ಗೊತ್ತಾಗಿದೆ. ವಿಶೇಷವಾಗಿ ನ್ಯಾಯ ಒದಗಿಸುವುದರಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಇಲಾಖೆಯು ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದ 3ನೇ ಅತ್ಯುತ್ತಮ ಪೊಲೀಸ್ ಠಾಣೆ ಎಂದು ಗುರುತಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು, ಕವಿತಾಳ ಪೊಲೀಸ್ ಠಾಣೆಯಂತೆಯೇ ಅತ್ಯುತ್ತಮ ಪೊಲೀಸ್ ಠಾಣೆಗಳಾಗಬೇಕು ಎಂದು ಸರ್ಕಾರ ಬಯಸುತ್ತದೆ ಎಂದರು.
ಪೊಲೀಸ್ ಇಲಾಖೆಯು ಪ್ರತಿನಿತ್ಯ ಸವಾಲುಗಳನ್ನು ಎದುರಿಸುತ್ತದೆ. ಸವಾಲುಗಳ ಮಧ್ಯೆ ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರವು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡುವುದರಲ್ಲಿ ಯಶಸ್ವಿಯಾಗಿದೆ. ರಾಜ್ಯಕ್ಕೆ ಬಂಡಾವಾಳ ಹೂಡಿಕೆಗೆ ಬರುವ ಜನ ಶಾಂತಿಣ ನೆಮ್ಮದಿಯನ್ನು ಬಯಸುತ್ತಾರೆ. ರಾಜ್ಯದಲ್ಲಿ ಸೌಹಾರ್ದಯುತ ವಾತಾವರಣ ಸೃಷ್ಟಿ ಮಾಡುವುದರಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ಹೇಳಿದರು.
ಕರ್ತವ್ಯದ ವೇಳೆ ಇಲಾಖೆಗೆ ಚ್ಯುತಿ ಬಾರದಂತೆ ಅತ್ಯಂತ ಕ್ಷಿಪ್ರವಾಗಿ ಅಪರಾಧಗಳನ್ನು ಪತ್ತೆ ಹಚ್ಚಿರುವುದನ್ನು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತೋರಿಸಿಕೊಟ್ಟಿದೆ. ಕಾರ್ಯದಕ್ಷತೆಗೆ, ಸಾಮಾರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.
ರಾಜ್ಯದಲ್ಲಿ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ನಮ್ಮ ಸರ್ಕಾರವು ಮುಂದಾಗಿದ್ದು, ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆಹಚ್ಚುವ ಮೂಲಕ ದಂಧೆಯಲ್ಲಿ ತೊಡಗಿದ ಅನೇಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ದೇಶದಲ್ಲಿ ಸೈಬರ್ ಕ್ರೈಂ ಹಾವಳಿ ಹೆಚ್ಚಾಗುತ್ತಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕವೂ ಸೈಬರ್ ಕಮಾಂಡ್ ಯೂನಿಟ್ ಸ್ಥಾಪಿಸಿ, ಡಿಜಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಿದೆ. ಸೈಬರ್ ಕಮಾಂಡ್ ಯೂನಿಟ್‌ಗೆ ಹೆಚ್ಚು ಪ್ರೋತ್ಸಾಹಿಸಿ ಮೂಲಕ ಸೈಬರ್ ಅಪರಾಧಗಳನ್ನು ಕಡಿಮೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವರು ದೇಶವನ್ನು ನಕ್ಸಲ್ ಮುಕ್ತ ಮಾಡಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಬಹಳ ವರ್ಷಗಳ ಹಿಂದೆಯೇ ಆ್ಯಂಟಿ ನಕ್ಸಲ್ ಫೋರ್ಸ್ ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ.
ಆಧುನಿಕತೆ ಪ್ರತಿನಿತ್ಯ ಸವಾಲುಗಳನ್ನು ಒಟ್ಟುತ್ತಿದೆ. ಎಲ್ಲ ಹಂತದಲ್ಲಿಯೂ ತರಬೇತಿಯನ್ನು ಪಡೆಯುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಕೆಲಸ ಮಾಡಬೇಕಿದೆ ಎಂದು ಹೇಳಿದರು.


