ಸಾರ್ವಜನಿಕ ಬದುಕಿನಲ್ಲಿ ಇರುವುದು ಸರಿಯಲ್ಲ-ಸಿದ್ದರಾಮಯ್ಯ
ದಾವಣಗೆರೆ:ವಂಶ ರಾಜಕಾರಣ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತದಾರ ತಿರಸ್ಕರಿಸಿದ ನಂತರವೂ ಸಾರ್ವಜನಿಕ ಬದುಕಿನಲ್ಲಿ ಮುಂದುವರೆಯುವುದು ಸರಿಯಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಬಯಸಿದ್ದಕ್ಕೆ ನಮ್ಮ ಪುತ್ರ ಯತೀಂದ್ರ ರಾಜಕೀಯ ಪ್ರವೇಶಿಸಿ, ಜನಪ್ರತಿನಿಧಿಯಾಗಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ ಎಂದರು.
ಕುಟುಂಬವೇ ರಾಜಕಾರಣದಲ್ಲಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅವರ ಇಬ್ಬರು ಮಕ್ಕಳು ಸೊಸೆಯಂದಿರು, ಮೂವರು ಮೊಮ್ಮಕ್ಕಳು, ಅಳಿಯ ರಾಜಕಾರಣದಲ್ಲಿದ್ದಾರೆ.
ಅಂತಹವರು ನಮ್ಮ ಕುಟುಂಬವನ್ನು ಟೀಕಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ನಾವು ಕುಟುಂಬ ರಾಜಕಾರಣ ಮಾಡುತ್ತಿಲ್ಲ, ಜನರೇ ನಮ್ಮನ್ನು ಕರೆತಂದು ಚುನಾವಣೆಗೆ ನಿಲ್ಲಿಸುತ್ತಾರೆ ಎಂಬುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ಚನ್ನಪಟ್ಟಣದಲ್ಲಿ ಸೋತಿದ್ದು ಏಕೆ
ಹಾಗಿದ್ದರೆ, ಚನ್ನಪಟ್ಟಣದ ಉಪಚುನಾವಣೆಯಲ್ಲಿ ಅವರ ಮಗ 23,000 ಮತಗಳ ಅಂತರದಿಂದ ಸೋತಿದ್ದು ಏಕೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಜನ ಬಯಸಿದಾಗ ಚುನಾವಣೆಯಲ್ಲಿ ಸ್ಪರ್ಧೆ ತಪ್ಪಲ್ಲ, ಆದರೆ, ತಿರಸ್ಕರಿಸಿದ ನಂತರವೂ ಇನ್ನೊಂದು ಕುಟುಂಬದ ಬಗ್ಗೆ ಮಾತನಾಡುವುದು ಸರಿಯೇ ಎಂದರು.
ದೇವೇಗೌಡ ಹಾಗೂ ಕುಮಾರಸ್ವಾಮಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈಗ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ, ಇದುವರೆಗೂ ಅವರುಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುರಿತು ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ.
ಕಟ್ಟಿದ ಗೂಡಿನಲ್ಲಿ ರಾಜಕಾರಣ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಆರೋಪ ಅಲ್ಲಗಳೆದ ಸಿದ್ದರಾಮಯ್ಯ, ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದೆವು.
ಜೆಡಿಎಸ್ 19ಕ್ಕೆ ಇಳಿದಿದೆ
ಜೆಡಿಎಸ್‌ನಿಂದ ನಾನು ಹೊರಬಂದ ನಂತರ ಅಷ್ಟು ಸೀಟು ಗೆಲ್ಲಲೇ ಇಲ್ಲ, ಈಗ 19ಕ್ಕೆ ಇಳಿದಿದೆ ಎಂದು ಟೀಕಿಸಿದರು.
ದೇವೇಗೌಡ ಸೇರಿದಂತೆ ಬಿಜೆಪಿ ಸೇರ್ಪಡೆಗೊಂಡಿರುವ ಕೆಲವು ನಾಯಕರು ತಮ್ಮ ಸಾರ್ವಜನಿಕ ಬದುಕನ್ನು ಬಲಪಡಿಸಿಕೊಳ್ಳಲು ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ.
ಮೋದಿ ಟೀಕೆ ನೆನಪಿಸಿಕೊಳ್ಳಲಿ
ಇವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆರ್‌ಎಸ್‌ಎಸ್ ನಾಯಕರನ್ನು ಯಾವ ರೀತಿ ಟೀಕಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದರು.
ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಮುಖ್ಯಮಂತ್ರಿ, ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಕೇಂದ್ರ ಸಚಿವರ ವಿರುದ್ಧ ವ್ಯಂಗ್ಯವಾಡಿದರು.


