ನವದೆಹಲಿ:ಕಾಂಗ್ರೆಸ್‌ನ ಮಹಿಳಾ ಮೀಸಲಾತಿ ವಿರೋಧಿ ಮನಸ್ಥಿತಿಯಲ್ಲಿ ಬದಲಾವಣೆಯೇ ಆಗಿಲ್ಲ ಎಂಬುದಕ್ಕೆ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗದೆ ಸೋಲಾಗಿರುವುದೇ ಸಾಕ್ಷಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮಹತ್ವದ ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸಿರುವುದು ಲೋಕಸಭೆಯಲ್ಲಿ 30 ವರ್ಷಗಳ ಕರಾಳ ಇತಿಹಾಸ ಮರುಕಳಿಸಿದಂತಾಗಿದೆ ಎಂದಿದ್ದಾರೆ.
ಸಂಘಟಿತವಾಗಿ ವಿಫಲಗೊಳಿಸಿದವು
ಕೇಂದ್ರದಲ್ಲಿ ಹೆಚ್.ಡಿ.ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳನ್ನು ಮೀಸಲಿಡುವ ಉದ್ದೇಶದಿಂದ ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು, ಅಂದೂ ಸಹಾ ಇದೇ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಘಟಿತವಾಗಿ ವಿಫಲಗೊಳಿಸಿದ್ದವು.
ಮಹಿಳೆಯರಿಗೆ ಆಗಿದ್ದ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ದಿಟ್ಟಹೆಜ್ಜೆ ಇರಿಸಿ, ಪುನಃ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ತಂದಿದ್ದರು, ಆದರೆ, ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಮತ್ತೊಮ್ಮೆ ತಡೆಯೊಡ್ಡಿದವು.
ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ, ಇದು ಮಾತೃಶಕ್ತಿಗೆ ಮಾಡಿರುವ ಅಪಮಾನ, ಈ ಕೃತ್ಯಕ್ಕೆ ಕಾರಣರಾದ ಎಲ್ಲ ರಾಜಕೀಯ ಪಕ್ಷಗಳು ಹಾಗು ಅವುಗಳ ನಾಯಕರು ಭವಿಷ್ಯದಲ್ಲಿ ತಕ್ಕ ಪಾಠ ಕಲಿಯಲಿದ್ದಾರೆ.
ಇಂಡಿಯಾ ಒಕ್ಕೂಟದ ಕುತಂತ್ರ
ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ನಾರಿಶಕ್ತಿ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಕುತಂತ್ರದಿಂದ ನಿರಾಶರಾಗಬೇಕಿಲ್ಲ.
ಪ್ರಧಾನಿ ಮೋದಿ ನಾಯಕತ್ವದಲ್ಲಿ ಮುಂದೊಂದು ದಿನ ನಾರಿಶಕ್ತಿಗೆ ಅಗ್ರಮನ್ನಣೆ ದೊರೆಯುವುದು ಖಚಿತ, ಶಾಸನಸಭೆಗಳಲ್ಲಿ ಶೇಕಡ 33 ಮಹಿಳಾ ಮೀಸಲು ಗುರಿ ಸಾಧನೆ ಶತಸಿದ್ಧ ಎಂದಿದ್ದಾರೆ.


