ಬೆಂಗಳೂರು:ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್.ಸಂತೋಷ್ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮನೆಗೆ ಇಂದು ಸೌಹಾರ್ದ ಭೇಟಿ ನೀಡಿದರು.
ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ನಿರೀಕ್ಷೆಯಲ್ಲಿರುವ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಐತಿಹಾಸಿಕ ಗೆಲುವು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂಬುದಾಗಿ ಸಂತೋಷ್ ತಿಳಿಸಿದರೆಂದು ಯಡಿಯೂರಪ್ಪ ತಮ್ಮ ಜಾಲತಾಣ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಮನೆಗೆ ಸೌಹಾರ್ದಯುತ ಭೇಟಿ ನೀಡಿ ನನ್ನೊಂದಿಗೆ ಉಪಹಾರ ಸೇವಿಸಿದ ಸಂತೋಷ್, ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ದೇಶಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಅವರ ಸಂಘಟನಾ ಸಾಮರ್ಥ್ಯ ಮತ್ತು ಚತುರತೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸ್ಫೂರ್ತಿಯ ಸೆಲೆಯಾಗಿದೆ.
ನನ್ನ 50 ವರ್ಷಗಳ ಯಶಸ್ವಿ ರಾಜಕೀಯ ಪಯಣಕ್ಕೆ ಸಂತೋಷ್ ಆತ್ಮೀಯ ಶುಭಾಶಯ ಸಲ್ಲಿಸಿದರು ಎಂದು ಯಡಿಯೂರಪ್ಪ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


