ಬೆಂಗಳೂರು:ಎಲ್ಲ ಹಂತದ ಅಧಿಕಾರಿಗಳೂ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗೆ ಶಿಸ್ತು ಪಾಲನೆ ಮೂಲಕ ಹಾಜರಾತಿ ಮತ್ತು ಸಮಯಪಾಲನೆ ನಿಯಮಗಳಡಿ ನಿಯಂತ್ರಿಸಲು ಸರ್ಕಾರ ಕರ್ತವ್ಯ ಆಪ್ ಎಂಬ ’ಜಿಯೋ ಫೆನ್ಸಿಂಗ್’ ವ್ಯವಸ್ಥೆ ಅಳವಡಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿ ಆವರಣದಲ್ಲಿ ಹಾಜರಿರಬೇಕು, ಈ ಮೂಲಕ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ.
ಹಳೆ ಚಾಳಿಗೆ ಬ್ರೇಕ್
ಕಚೇರಿಗೆ ಬಾರದ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ನೌಕರರ ಹಳೆ ಚಾಳಿಗೆ ಸರ್ಕಾರ ಬ್ರೇಕ್ ಹಾಕಿದೆ.
ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಜಿಯೋ ಟ್ಯಾಗ್ಡ್ ಹಾಜರಾತಿ ವ್ಯವಸ್ಥೆ ಕಡ್ಡಾಯ ಜಾರಿ ಮೂಲಕ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ.
ಸುತ್ತೋಲೆ ಹೊರಬಿದ್ದು ಒಂದು ವಾರ ಕಳೆದರೂ ಇನ್ನೂ ಅನೇಕ ಮಂದಿ ನೌಕರರು ಆಪ್ ಡೌನ್‌ಲೋಡ್ ಮಾಡಿಕೊಂಡಿರದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅತ್ಯಂತ ಕಠಿಣ ನಿಲುವು ತಳೆದಿದ್ದು, ತಕ್ಷಣವೇ ಎಲ್ಲರೂ ಆಪ್ ಡೌನ್‌ಲೋಡ್ ಮಾಡಿಕೊಂಡು ಹಾಜರಾತಿ ದಾಖಲಿಸಲು ಸೂಚಿಸಿದ್ದಾರೆ.
ನೌಕರರ ವಿರುದ್ಧ ಕ್ರಮ
ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಆದೇಶಿಸಿದ್ದಾರೆ.
ಸರ್ಕಾರದ ಈ ಕ್ರಮ ಸಮಯ ಪಾಲನೆಗೆ ಮಾತ್ರ ಸೀಮಿತವಾಗಿರದೆ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸುವ ಮತ್ತು ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ತರುವ ಮಹತ್ವದ ಗುರಿ ಹೊಂದಿದೆ ಎಂದು ಮುಖ್ಯಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಹೊಸ ನಿಯಮದ ಪ್ರಕಾರ ಪ್ರತಿಯೊಬ್ಬ ಸರ್ಕಾರಿ ನೌಕರ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಕರ್ತವ್ಯ ಆಪ್ ಮೂಲಕ ಡಿಜಿಟಲ್ ಹಾಜರಾತಿ ದಾಖಲಿಸುವುದು ಅನಿವಾರ್ಯ.
ಆಪ್‌ನಲ್ಲಿ ಮಾತ್ರ ಹಾಜರಾತಿ
ಈ ವ್ಯವಸ್ಥೆಯ ವಿಶೇಷತೆ ಎಂದರೆ, ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಸಿದ್ದು ನೌಕರರು ತಾವು ಕೆಲಸ ಮಾಡುವ ಕಚೇರಿಯ ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯೊಳಗೆ ಇದ್ದಾಗ ಮಾತ್ರ ಆಪ್‌ನಲ್ಲಿ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ, ಕಚೇರಿಯಿಂದ ಹೊರಗಿದ್ದು ಹಾಜರಾತಿ ದಾಖಲಿಸಲು ಅವಕಾಶ ಇರುವುದಿಲ್ಲ, ಬೆಳಿಗ್ಗೆ 10 ಗಂಟೆಯ ನಂತರ ಹಾಜರಾತಿ ದಾಖಲಿಸಲು ತಂತ್ರಾಂಶದಲ್ಲಿ ಅವಕಾಶ ಇಲ್ಲ ಎಂಬುದು ವಿಶೇಷ.
ಕಚೇರಿ ಕೆಲಸದ ಸಮಯ ಆರಂಭವಾದ ತಕ್ಷಣ ನೌಕರರು ತಮ್ಮ ಸ್ಥಾನದಲ್ಲಿ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಲಾಗಿನ್ ಕಡ್ಡಾಯ
ಈ ಹಿಂದೆ ಬಯೋಮೆಟ್ರಿಕ್ ಯಂತ್ರಗಳು ಕೆಟ್ಟಿವೆ ಅಥವಾ ತಾಂತ್ರಿಕ ದೋಷವಿದೆ ಎಂಬ ನೆಪ ಹೇಳಿ ಹಾಜರಾತಿಯಿಂದ ತಪ್ಪಿಸಿಕೊಳ್ಳುತ್ತಿದ್ದ ನೌಕರರಿಗೆ, ಈಗ ತಮ್ಮ ಸ್ವಂತ ಮೊಬೈಲ್ ಅಥವಾ ಕಚೇರಿಯ ಡಿಜಿಟಲ್ ಸಾಧನಗಳ ಮೂಲಕವೇ ಲಾಗಿನ್ ಆಗುವುದು ಕಡ್ಡಾಯವಾಗಿದೆ.
ಆರ್ಥಿಕ ಇಲಾಖೆ ಈಗಾಗಲೇ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತಕ್ಷಣವೇ ಎಲ್ಲಾ ನೌಕರರು ಆಪ್ ಡೌನ್‌ಲೋಡ್ ಮಾಡಿಕೊಂಡು ಹಾಜರಾತಿ ದಾಖಲಿಸಲು ಆದೇಶಿಸಲಾಗಿದೆ.


