ಶೃಂಗೇರಿ ಕ್ಷೇತ್ರ ಅಂಚೆ ಮರು ಮತಎಣಿಕೆಯಲ್ಲಿ ಬಿಜೆಪಿ ಗೆಲುವು
ಬೆಂಗಳೂರು:ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಎರಡೂ ಸ್ಥಾನಗಳನ್ನು ಉಳಿಸಿಕೊಂಡಿದೆ.
ನ್ಯಾಯಾಲಯದ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಹಾಲಿ ಶಾಸಕ ರಾಜೇಗೌಡ ಸೋಲುವಂತಾಗಿದೆ.
ಎಐಸಿಸಿ ಗಮನ ಎತ್ತ
ಒಂದೆಡೆ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಕೈಹಿಡಿದಿದ್ದರೆ, ಇನ್ನೊಂದಡೆ ಕರ್ನಾಟಕ ಕಾಂಗ್ರೆಸ್ ನಾಯಕತ್ವ ಗೊಂದಲ ಮುಂದುವರಿದಿದ್ದು, ಎಐಸಿಸಿ ಈಗ ಇತ್ತ ಗಮನಹರಿಸಬೇಕಿದೆ.
ಬಂಡಾಯದ ಬಿಸಿ ನಡುವೆಯೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು, ಬಿಜೆಪಿ ಅಭ್ಯರ್ಥಿ ದಾಸ್ ಕರಿಯಪ್ಪ ವಿರುದ್ಧ 5,708 ಮತಗಳಿಂದ ಜಯ ಗಳಿಸಿದ್ದಾರೆ.
ಸಮರ್ಥ್ ಪರ 69,578 ಮತಗಳು, ದಾಸ್ ಕರಿಯಪ್ಪ ಪರ 63,570 ಮತಗಳು ಚಲಾವಣೆ ಆಗಿದ್ದು, ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೂಡ್ಲಿ ಬೆಟ್ಟು 18,624 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೆಲುವು
ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 98,919 ಮತ ಪಡೆದರೆ, ಬಿಜೆಪಿಯ ವೀರಣ್ಣ ಚರಂತಿಮಠ್ 75,587 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 22,332 ಮತಗಳು.
ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ಮೊದಲ ಏಳು ಸುತ್ತಿನಲ್ಲಿ ಭಾರೀ ಹಿನ್ನಡೆಯಲ್ಲಿದ್ದರೂ ನಂತರದ ಎಣಿಕೆಯಲ್ಲಿ ಮುನ್ನಡೆ ಪಡೆದು ತಮ್ಮ ತಾತ ಶಾಮನೂರು ಶಿವಶಂಕರಪ್ಪ ಅವರ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
ದಾಸ್ ಕರಿಯಪ್ಪ ಕೊನೆ ಗಳಿಗೆವರೆಗೆ ತೀವ್ರ ಪೈಪೋಟಿ ನೀಡಿದರಲ್ಲದೆ, ಕಾಂಗ್ರೆಸ್ ಭದ್ರ ಕೋಟೆ ಛಿದ್ರಗಿಳಿಸಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.
ಹೆಚ್ಚು ಮತಗಳ ಅಂತರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 30,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು.
ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರು ತಮಗೆ ಟಿಕೆಟ್ ನೀಡಬೇಕೆಂದು ಕೊನೆವರೆಗೂ ಪಟ್ಟು ಹಿಡಿದಿದ್ದರು.
ಕಣದಲ್ಲಿದ್ದ ಪಕ್ಷದ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಅವರನ್ನು ಸ್ಪರ್ಧೆಯಿಂದ ನಿವೃತ್ತಿಗೊಳಿಸಿದರೂ ಎಸ್‌ಡಿಪಿಐ ಅಭ್ಯರ್ಥಿ ಸೇರಿದಂತೆ ಕಣದಲ್ಲಿದ್ದ ಇತರ ಅಲ್ಪಸಂಖ್ಯಾತ ಅಭ್ಯರ್ಥಿಗಳು ಒಟ್ಟಾರೆಯಾಗಿ ಸುಮಾರು 23,000 ಮತಗಳನ್ನು ಪಡೆದರೂ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರು.
ಮುಖ್ಯಮಂತ್ರಿ ಒಂದು ವಾರ ಬಿಡಾರ
ಬಾಗಲಕೋಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ವಾರ ಅಲ್ಲಿಯೇ ಬಿಡಾರ ಹೂಡಿ ಚುನಾವಣಾ ಪ್ರಚಾರ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲುವಲ್ಲಿ ಶ್ರಮಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ವೈ.ಮೇಟಿ ಸುಮಾರು 5,000 ಮತಗಳ ಅಂತರದಿಂದ ಚರಂತಿಮಠ್ ಅವರನ್ನು ಪರಾಭವಗೊಳಿಸಿದ್ದರು, ಉಪಚುನಾವಣೆಯಲ್ಲಿ ಪುತ್ರ ಉಮೇಶ್ ಮೇಟಿ ಭಾರೀ ಅಂತರದ ಗೆಲುವಿನ ಮೂಲಕ ಕ್ಷೇತ್ರ ಉಳಿಸಿಕೊಂಡಿದ್ದಾರೆ.
ಉಪಚುನಾವಣೆ ನಡೆದ ಎರಡೂ ಕ್ಷೇತ್ರಗಳು ಈ ಹಿಂದೆ ಪ್ರತಿನಿಧಿಸಿದ್ದ ಶಾಸಕರ ಕುಟುಂಬಗಳ ಪಾಲಾಗಿವೆ.

ನ್ಯಾಯಾಲಯದ ಮೊರೆ
ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಚಲಾವಣೆಗೊಂಡಿದ್ದ 1,822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತಗೊಂಡಿದ್ದವು, ಇದನ್ನು ಪ್ರಶ್ನಿಸಿ ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು.
ಮೂರು ವರ್ಷಗಳ ಹೋರಾಟದ ನಂತರ ನ್ಯಾಯಾಲಯ ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು.
ಕಳೆದ ಶನಿವಾರ ರಾತ್ರಿಯಿಡೀ ನಡೆದ ಮತಎಣಿಕೆಯಲ್ಲಿ ಜೀವರಾಜ್ ಜಯಗಳಿಸಿದ್ದರಾದರೂ ಅಧಿಕೃತ ಪ್ರಕಟಣೆ ಹೊರಬಿದ್ದಿರಲಿಲ್ಲ.
ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಇಂದು ಫಲಿತಾಂಶ ಘೋಷಿಸಿ, ಅಭ್ಯರ್ಥಿಗೆ ಗೆಲುವಿನ ಪ್ರಮಾಣಪತ್ರ ನೀಡಿದರು.


