ಬೆಂಗಳೂರು : ಓಡಿಸ್ಸಾ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಿಸಲು ಕಾರಣೀಭೂತವಾದ ರಾಷ್ಟ್ರೀ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಇದೀಗ ಕರ್ನಾಟಕದತ್ತ ಮುಖ ಮಾಡಿದೆ.
ರಾಜ್ಯ ವಿಧಾನಸಭೆಗೆ 2028ರಲ್ಲಿ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಚುನಾವಣಾ ಪೂರ್ವ ಸಿದ್ಧತೆಯನ್ನು ಆರ್ ಎಸ್ಎಸ್ ಆರಂಭಿಸಿದೆ.
ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಆರ್ ಎಸ್ ಎಸ್ನ ಸರಸಂಘಚಾಲಕ ಮೋಹನ್ ಭಾಗವತ್ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಘ ಪರಿವಾರದ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಬೆಂಗಳೂರು ಹೊರವಲಯದ ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ ಈ ಸಭೆಗೆ ರಾಜ್ಯದ ಯಾವುದೇ ಬಿಜೆಪಿ ನಾಯಕರಿಗೂ ಆಹ್ವಾನ ನೀಡಿಲ್ಲ. ಬದಲಾಗಿ ಪರಿವಾರದ ಎಲ್ಲಾ ಪ್ರಮುಖ ನಾಯಕರು ಪಾಲ್ಗೊಂಡಿರುವ ಸಭೆಯಲ್ಲಿ ಸಂಘದ ಚಟುವಟಿಕೆಗಳ ವಿಸ್ತರಣೆಯ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮಾಡಬೇಕಾದ ತಂತ್ರಗಾರಿಕೆ ಕುರಿತು ಚರ್ಚೆ ನಡೆಯುತ್ತಿದೆ.
ಕೇವಲ ಒಂದು ಚುನಾವಣೆ ಗೆಲ್ಲುವುದಕ್ಕಿಂತ ತಮ್ಮ ಗಮನ ಬಿಜೆಪಿಗೆ ದೊಡ್ಡ ಪ್ರಮಾಣದ ಮತ ಬ್ಯಾಂಕ್ ಸೃಷ್ಟಿಸುವ ಕಡೆ ಇರಬೇಕು ಎಂದು ಸಭೆಯಲ್ಲಿ ತಿಳಿಸಿರುವ ನಾಯಕರು, ಮತ ಬ್ಯಾಂಕ್ ಗಟ್ಟಿಯಾದರೆ ಯಾರು ಬೇಕಾದರೂ ಚುನಾವಣೆ ಗೆಲ್ಲಬಹುದು. ಈ ನಿಟ್ಟಿನಲ್ಲಿ ಸ್ವಯಂ ಸೇವಕರು ಕೆಲಸ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ.
ಮೊದಲಿಗೆ ಬಿಜೆಪಿ ಮೇಲ್ವರ್ಗದ ಪರವಾದ ಪಕ್ಷ ಎಂಬ ಹಣೆಪಟ್ಟಿ ಕೇಳಿಕೊಳ್ಳಬೇಕು. ಶೋಷಿತರು, ದಲಿತರಿಗೆ ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ಮಾನ್ಯತೆ ಇಲ್ಲ ಎಂದು ಪ್ರಚಾರ ಮಾಡಲಾಗುತ್ತಿದೆ.
ಇದನ್ನು ಸುಳ್ಳು ಎಂದು ಸಾಬೀತು ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವಂತಾಗಬೇಕು ಎಂದು ಹೇಳಿದ್ದಾರೆ
ದೇಶದ ಒಟ್ಟು ಜನಸಂಖ್ಯೆಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಹಿಂದುಳಿದ ವರ್ಗಗಳಂತೂ ಅತ್ತ ಮೀಸಲಾತಿಯು ಇಲ್ಲ, ಇತ್ತ ಸ್ವಂತ ಬಲದ ಮೇಲೆ ಚುನಾವಣೆ ಸ್ಪರ್ಧಿಸಿ ಆಯ್ಕೆಯಾಗುವ ಪರಿಸ್ಥಿತಿಯು ಇಲ್ಲ. ಹೀಗಾಗಿ ಈ ಸಮುದಾಯಗಳಿಗೆ ಸಂಘ ಪರಿವಾರ ಧ್ವನಿಯಾಗಬೇಕು.
ದಲಿತ ಮತ್ತು ಹಿಂದುಳಿದ ವರ್ಗಗಳನ್ನು ಪ್ರಮುಖವಾಗಿಟ್ಟುಕೊಂಡು ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಪ್ರಭಾವಿ ಸಮುದಾಯಗಳಾದ ವೀರಶೈವ ಮತ್ತು ಒಕ್ಕಲಿಗ ಮತ ಬ್ಯಾಂಕ್ ನೊಂದಿಗೆ ನಡೆಸಿದ ರಾಜಕಾರಣಕ್ಕೆ ಅಹಿಂದ ರಾಜಕಾರಣದ ಮೂಲಕ ನೀಡಿದ ಉತ್ತರ ಯಶಸ್ವಿಯಾಯಿತು.
ಇದೇ ಮಾನದಂಡ ನೆರೆಯ ತೆಲಂಗಾಣದಲ್ಲೂ ಅನುಸರಿಸಿದ ಕಾಂಗ್ರೆಸ್ ಅಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಉತ್ತರದ ರಾಜ್ಯಗಳ ವಿಷಯ ಬಂದಾಗ ಕಾಂಗ್ರೆಸ್ ತಮ್ಮ ಕಾರ್ಯ ಶೈಲಿಯನ್ನು ಬದಲಾಯಿಸಿ ಮೇಲ್ವರ್ಗದ ರಾಜಕಾರಣ ಮಾಡಿದ ಪರಿಣಾಮ ಸುಲಭವಾಗಿ ಗೆಲುವು ಸಾಧ್ಯವಿದ್ದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಮುಗ್ಗರಿಸಿತು ಎಂದು ಅಂಕಿ -ಅಂಶಗಳ ಸಮೇತ ಸಭೆಯಲ್ಲಿ ಪ್ರಮುಖರು ವಿವರಣೆ ನೀಡಿದ್ದಾರೆ.
ಮಹಾರಾಷ್ಟ್ರ, ಬಿಹಾರ ಚುನಾವಣೆ ಸಮಯದಲ್ಲಿ ಸಂಘ ಪರಿವಾರ ದಲಿತರು, ಹಿಂದುಳಿದ ಮತ್ತು ಆದಿವಾಸಿಗಳು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಸಂಘಟನೆ ವಿಸ್ತರಣೆ ಮಾಡಿತು.
ದಲಿತರನ್ನು ಸಂಘಟನೆಯ ಮುಖ್ಯವಾಹಿನಿಗೆ ಸೇರ್ಪಡೆ ಮಾಡಿಕೊಂಡು ಅವರಿಲ್ಲದ್ದ ಅಸ್ಪೃಶ್ಯತೆ ಕೊರಗು ನಿವಾರಣೆ ಮಾಡಲಾಯಿತು. ಹಿಂದುಳಿದವರಿಗೆ ನಾಯಕತ್ವ ನೀಡಿ ಅವರಲ್ಲಿನ ಅಭದ್ರತೆಯ ಮನೋಭಾವ ನಿವಾರಣೆ ಮಾಡಲಾಯಿತು.ಈ ಕಾರ್ಯತಂತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಈ ಹಿಂದೆಂದೂ ಕಂಡರಿಯದ ಅಭೂತಪೂರ್ವ ದಿಗ್ವಿಜಯವನ್ನು ದಾಖಲಿಸಿದೆ.
ಕರ್ನಾಟಕದಲ್ಲಿನ ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ.40ರಷ್ಟು ಇತರೆ ಹಿಂದುಳಿದ ವರ್ಗಗಳಿದ್ದರೆ, ಶೇಕಡಾ 26ರಷ್ಟು ಒಕ್ಕಲಿಗ ಮತ್ತು ಲಿಂಗಾಯತ ಮತದಾರರಿದ್ದಾರೆ, ಉಳಿದಂತೆ ಅಲ್ಪಸಂಖ್ಯಾತ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಬ್ರಾಹ್ಮಣ ಮೊದಲಾದ ಸಮುದಾಯಕ್ಕೆ ಸೇರಿದ ಮತದಾರರಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡು ಇತರೆ ಹಿಂದುಳಿದ ಮತ್ತು ದಲಿತ ಸಮುದಾಯದ ಮತಗಳು ಸಮೀಕರಣವಾಗಬೇಕು. ಇದಾದ ನಂತರ ಪ್ರಬಲ ಸಮುದಾಯಕ್ಕೆ ಸೇರಿದ ಮತಗಳು ತನ್ನಿಂತಾನೇ ಬರಲಿವೆ ಎಂದು ವಿವರಿಸಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ಈ ಕಾರ್ಯಯೋಜನೆ ಜಾರಿಗೆ ತರಲು ಕರ್ನಾಟಕವನ್ನು ಸಂಘಟನಾತ್ಮಕವಾಗಿ ಮೂರು ಭಾಗಗಳಾಗಿ ವಿಂಗಡಿಸಲು ತೀರ್ಮಾನ ಕೈಗೊಳ್ಳಲಾಗಿದೆ
ಕರ್ನಾಟಕವನ್ನು ದಕ್ಷಿಣ ಪ್ರಾಂತ ಮತ್ತು ಉತ್ತರ ಪ್ರಾಂತ ಎಂದು ವಿಂಗಡಿಸಲಾಗಿದೆ. ಈಗ ಹೊಸದಾಗಿ ಕರಾವಳಿ ಪ್ರಾಂತ್ಯ ಎಂದು ಮೂರನೇ ಭಾಗ ಮಾಡಿ ಸಂಘಟನೆ ವಿಸ್ತರಣೆ ಮಾಡಲು ಸಭೆ ನಿರ್ಣಯಿಸಿದೆ.
ಸಂಘ ಪರಿವಾರದ ಪ್ರಮುಖ ನಾಯಕರಾದ ಮುಕುಂದ್ ಅವರಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ. ಇವರ ಜೊತೆಗೆ ನಾ.ತಿಪ್ಪೇಸ್ವಾಮಿ, ಜಿ.ಎಸ್.ಉಮಾಪತಿ, ರಾಘವೇಂದ್ರ ಕಾಗವಾಡ, ರಾಜೇಶ್ ಪದ್ಮಾರ್, ಎಕ್ಕಾ ಚಂದ್ರಶೇಖರ್ ಅವರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅರವತ್ತು ಜನರನ್ನು ಪೂರ್ಣಾವಧಿಯಾಗಿ ಕೆಲಸ ಮಾಡಲು ನಿಯೋಜಿಸಬೇಕು. ಈ 60 ಜನರು ಪ್ರಮುಖವಾಗಿ ದಲಿತರು ಮತ್ತು ಆದಿವಾಸಿಗಳ ಕೇರಿಗಳಲ್ಲಿ ಕೆಲಸ ಮಾಡಬೇಕು ಹಿಂದುಳಿದ ಸಮುದಾಯಗಳ ಪ್ರಮುಖರ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ನಿರ್ಧರಿಸಲಾಗಿದೆ.


