ತಮಿಳುನಾಡಿನ ವ್ಯಕ್ತಿಯೊಬ್ಬ ತಂದು ಇರಿಸಿದ ಶಂಕೆ: ಎನ್‌ಐಎ ತನಿಖೆ
ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಗರದಲ್ಲಿ ಸಂಚರಿಸಿದ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳು ತಮಿಳುನಾಡಿನಿಂದ ಬಂದಿದ್ದವು ಎಂಬ ಶಂಕೆ ವ್ಯಕ್ತವಾಗಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ತನಿಖೆ ತೀವ್ರಗೊಳಿಸಿದೆ.
ರಾಜ್ಯ ಪೋಲಿಸರು ತಮಿಳುನಾಡಿಗೆ
ವ್ಯಕ್ತಿಯೊಬ್ಬ ಈ ಸ್ಫೋಟಕಗಳನ್ನು ಇರಿಸಿದ ಕುರಿತು ಬಲವಾದ ಮಾಹಿತಿ ದೊರೆತಿದ್ದು, ಇದರ ಆಧಾರದ ಮೇಲೆ ನಗರ ಪೋಲಿಸರು ತಮಿಳುನಾಡಿಗೆ ತೆರಳಿದ್ದಾರೆ.
ಇದರ ಜೊತೆಯಲ್ಲೇ ಕೇಂದ್ರದ ವಿವಿಧ ತನಿಖಾ ತಂಡಗಳು ನಗರಕ್ಕೆ ಧಾವಿಸಿ ವಿವಿಧ ಕೋನಗಳಿಂದ ತನಿಖೆ ನಡೆಸಿವೆ.
ಪ್ರಾಥಮಿಕ ತನಿಖೆಯಿಂದ ಜಿಲೆಟಿನ್ ಕಡ್ಡಿಗಳನ್ನು ಉದ್ದೇಶಪೂರ್ವಕವಾಗಿಯೇ ಇರಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಕೇಂದ್ರದ 3 ತನಿಖಾ ಸಂಸ್ಥೆ
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ರಕ್ಷಣಾ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ಆರ್‌ಎಡಬ್ಲ್ಯೂ-ರಾ) ಜೊತೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಭದ್ರತಾ ವೈಫಲ್ಯ ಎಂಬುದಾಗಿ ಪರಿಗಣಿಸಲಾಗಿದೆ.
ಪ್ರಧಾನಿ ಅವರನ್ನು ಗುರಿಯಾಗಿಸಿ ನಡೆಸಿರುವ ವ್ಯವಸ್ಥಿತ ಸಂಚು ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ರಾಜ್ಯದಲ್ಲಿ ಭದ್ರತಾ ಉಸ್ತುವಾರಿ ವಹಿಸಿದ್ದ ಹಿರಿಯ ಪೋಲಿಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ಧತೆ ನಡೆದಿದೆ.
ಶಿಸ್ತು ಕ್ರಮದ ಭೀತಿ
ರಾಜ್ಯ ಗುಪ್ತಚರ ವಿಭಾಗದ ಎಡಿಜಿಪಿ ಲಾಬೂರಾಮ್, ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌ಪಿ ಶ್ರೀನಿವಾಸ್‌ಗೌಡ ಸೇರಿದಂತೆ ಪ್ರಧಾನಿಗಳ ಭದ್ರತಾ ಉಸ್ತುವಾರಿ ವಹಿಸಿದ್ದ ಪೊಲೀಸ್ ಅಧಿಕಾರಿಗಳಿಗೆ ಶಿಸ್ತು ಕ್ರಮದ ಭೀತಿ ಎದುರಾಗಿದೆ.
ಎನ್‌ಐಎ ಡಿವೈಎಸ್‌ಪಿ ನೇತೃತ್ವದ ತಂಡ ಸ್ಫೋಟಕ ಪತ್ತೆಯಾದ ವಡೇರಹಳ್ಳಿಗೇಟ್ ಸಮೀಪದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಎನ್‌ಐಎ ಅಧಿಕಾರಿಗಳು ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಅವರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ತನಿಖಾ ಪ್ರಗತಿ ವರದಿ
ಪ್ರಧಾನಿ ಅವರ ಭದ್ರತೆ ಜವಾಬ್ದಾರಿ ಹೊಂದಿರುವ ಎನ್‌ಎಸ್‌ಜಿ ಪಡೆಯ ಮುಖ್ಯಸ್ಥರು ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖಾ ಪ್ರಗತಿಯ ವರದಿ ತರಿಸಿಕೊಂಡಿದ್ದಾರೆ.
ರಾಮನಗರ ಡಿವೈಎಸ್‌ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಥಮಿಕ ತನಿಖೆಯಲ್ಲಿ ಕೆಲವು ಆಘಾತಕಾರಿ ಅಂಶಗಳು ವ್ಯಕ್ತವಾಗಿದ್ದು, ಜಿಲೆಟಿನ್ ಕಡ್ಡಿಗಳಿದ್ದ ಬಾಕ್ಸ್‌ಗಳನ್ನು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಇಟ್ಟಿದ್ದಾರೆ ಎಂಬುದು ದೃಢಪಟ್ಟಿದೆ.
ಸ್ಫೋಟಕಗಳನ್ನು ಯಾವ ನಿರ್ದಿಷ್ಟ ಸಮಯದಲ್ಲಿ ತಂದು ಇರಿಸಲಾಗಿತ್ತು, ಯಾರು ಇಟ್ಟಿದ್ದಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಸಿಸಿಟಿವಿ ಇಲ್ಲದ ಜಾಗ
ಸ್ಫೋಟಕ ಪತ್ತೆಯಾದ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ತನಿಖಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ, ಆದಾಗ್ಯೂ, ರಸ್ತೆಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಒಂದು ತಂಡ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ಮಾಡುತ್ತಿದ್ದು, ಮತ್ತೊಂದು ತಂಡ ಸ್ಥಳಕ್ಕೆ ಜಿಲೆಟಿನ್ ಕಡ್ಡಿ ಹೇಗೆ ಬಂತು, ಯಾರು ತಂದು ರಸ್ತೆ ಪಕ್ಕ ಹಾಕಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದೆ.
ಸ್ಫೋಟಕ ಕಡ್ಡಿಗಳನ್ನು ವಿದ್ವಂಸಕ ಕೃತ್ಯಕ್ಕೆ ಬಳಸಲಾಗಿತ್ತೇ ಅಥವಾ ಕ್ವಾರಿಗೆ ತೆಗೆದುಕೊಂಡು ಹೋಗುವಾಗ ಪೊಲೀಸರನ್ನು ಕಂಡು ಭಯದಿಂದ ಜಿಲೆಟಿನ್ ಕಡ್ಡಿಗಳಿದ್ದ ಬಾಕ್ಸ್ ಎಸೆದು ಹೋಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ.
ಗೋದಾಮುಗಳ ತಪಾಸಣೆ
ಜಿಲೆಟಿನ್ ಕಡ್ಡಿ ಬಳಸುವ ಕಲ್ಲು ಕ್ವಾರಿ ಮಾಲೀಕರು ಹಾಗೂ ಕಾರ್ಮಿಕರ ಕುರಿತು ತನಿಖಾ ತಂಡಗಳು ಮಾಹಿತಿ ಕಲೆಹಾಕುತ್ತಿದ್ದು, ಸುತ್ತಮುತ್ತಲ ಗೋದಾಮುಗಳ ತಪಾಸಣೆ ನಡೆಸಲಾಗುತ್ತಿದೆ.
ಕಗ್ಗಲಿಪುರ ಠಾಣೆ ಪೊಲೀಸ್ ಮತ್ತು ಎನ್‌ಐಎ ತಂಡ ಜಂಟಿಯಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿವೆ.
ಕೃತ್ಯದ ಹಿಂದೆ ಅಂತರರಾಜ್ಯ ಅಥವಾ ಅಂತರಜಿಲ್ಲಾ ನಂಟು ಇದೆಯೇ ಎಂಬ ಕುರಿತು ‘ರಾ’ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಭದ್ರತಾ ಲೋಪ
ಅತ್ಯಂತ ಬಿಗಿ ಭದ್ರತೆ ನಡುವೆಯೂ ಭದ್ರತಾ ಲೋಪ ಸಂಭವಿಸಿರುವುದು ಕೇಂದ್ರ ಮತ್ತು ರಾಜ್ಯದ ಭದ್ರತಾ ಏಜೆನ್ಸಿಗಳಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಪ್ರಕರಣ ಸಂಬಂಧ 3 ತಂಡಗಳು ಪ್ರತ್ಯೇಕವಾಗಿ ಜಿಲಿಟಿನ್ ಕಡ್ಡಿ ಹಾಗೂ ಬೆಂಕಿ ಪೊಟ್ಟಣ ಪತ್ತೆಯಾದ ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲೀಪುರ ಸಮೀಪವಿರುವ ವಡೇರಹಳ್ಳಿ ಕೆರೆಗೆ ಭೇಟಿ ಕೊಟ್ಟು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆಯುತ್ತಿದೆ.


