ಬೆಂಗಳೂರು:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅನ್ನು ಸ್ವತಂತ್ರ ಸಂಸ್ಥೆಯಾದ ರಾಜ್ಯ ಚುನಾವಣಾ ಆಯೋಗದಿಂದಲೇ ನಡೆಸುವ ಸಾಧ್ಯಾಸಾಧ್ಯತೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಎಸ್‌ಐಆರ್‌ಗೆ ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಪರಿಷ್ಕರಣೆ ನಡೆಸಲು ಹೊರಟಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಭಯ
ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಮಗ್ರ ಪರಿಷ್ಕರಣೆ ನಂತರ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಯ ಹುಟ್ಟಿಸಿದೆ.
ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಚುನಾವಣಾ ಆಯೋಗ ಕಾರ್ಯನಿರ್ವಹಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ.
ಎಸ್‌ಐಆರ್ ವಿರೋಧಿಸುತ್ತಲೇ ಬಂದಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ಸಮಗ್ರ ಪರಿಷ್ಕರಣೆಗೆ ಅವಕಾಶ ನೀಡಬಾರದೆಂದು ಈ ಹಿಂದೆಯೇ ಸಂಪುಟದ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಎರಡು-ಮೂರು ಸಭೆಗಳನ್ನು ನಡೆಸಿದ್ದರು.
ಅಧಿಕಾರಿಗಳೊಂದಿಗೆ ಸಮಾಲೋಚನೆ
ಮುಖ್ಯಚುನಾವಣಾ ಆಯೋಗ ಕರ್ನಾಟಕದಲ್ಲೂ ಎಸ್‌ಐಆರ್ ಮಾಡಲು ನಿರ್ಧರಿಸಿ, ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಮುಖ್ಯಮಂತ್ರಿ ದಿಢೀರನೆ ಸರ್ಕಾರಿ ನಿವಾಸ ಕಾವೇರಿಯಲ್ಲಿ ಕಾನೂನು ಪರಿಣಿತರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ರಾಜ್ಯ ಚುನಾವನಾ ಆಯೋಗದಿಂದಲೇ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಧಂಸಿದಂತೆ ಸುಗ್ರೀವಾಜ್ಞೆ ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುವಂತೆ ಕಾನೂನು ಇಲಾಖೆಗೆ ಮುಖ್ಯಮಂತ್ರಿ ಸಲಹೆ ಮಾಡಿದ್ದಾರೆ.
ಮುಖ್ಯಚುನಾವಣಾ ಆಯೋಗದ ನಿರ್ಧಾರವನ್ನು ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಿರೋಧಿಸಿದರೂ ಪರಿಷ್ಕರಣೆ ತಡೆಯಲು ಆಗಲಿಲ್ಲ.
ಸರ್ಕಾರದ ಮಟ್ಟದಲ್ಲಿ ಕಾನೂನು
ಸುಮಾರು 92 ಲಕ್ಷ ಮತಗಳನ್ನು ರದ್ದುಪಡಿಸಲಾಗಿತ್ತು, ಮಮತಾ ನ್ಯಾಯಾಲಯದಲ್ಲಿ ಹೋರಾಟ ಮಾಡಿದರೇ ಹೊರತು ಸರ್ಕಾರದ ಮಟ್ಟದಲ್ಲಿ ಕಾನೂನು ನಿರ್ಧಾರಗಳನ್ನು ಕೈಗೊಳ್ಳಲಿಲ್ಲ.
ರಾಜ್ಯ ಸರ್ಕಾರದ ವತಿಯಿಂದಲೇ ಕಾನೂನು ರೂಪಿಸಿ ಪರ್ಯಾಯವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲು ಸುಗ್ರೀವಾಜ್ಞೆ ತರೋಣ ಎಂಬುದಾಗಿ ಕಾನೂನು ಇಲಾಖೆಗೆ ಹೇಳಿದ್ದಾರೆ.
ಕರ್ನಾಟಕದಲ್ಲಿ ಜೂನ್ 30ರಿಂದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆಯಲಿದೆ, ಅದಕ್ಕೂ ಮುನ್ನವೇ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವ ಬಗ್ಗೆ ತಮಗೆ ವರದಿ ನೀಡುವುದಾಗಿ ಇಲಾಖೆ ಮುಖ್ಯಮಂತ್ರಿ ಅವರಿಗೆ ತಿಳಿಸಿದೆ.


