ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊಮ್ಮಗ ಧವನ್ ರಾಕೇಶ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ.
ಚುನಾವಣಾ ರಾಜಕೀಯದಿಂದ ದೂರ ಇರಲು ನಿರ್ಧರಿಸಿರುವ ಸಿದ್ದರಾಮಯ್ಯ, ತಾವು ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರವನ್ನೇ ಮೊಮ್ಮಗನಿಗೆ ಬಿಟ್ಟುಕೊಡಲಿದ್ದಾರೆ.
ಬಲ ತುಂಬಲು ಕಾರ್ಯತಂತ್ರ
ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಧವನ್ ರಾಕೇಶ್ ಅವರಿಗೆ ರಾಜಕೀಯ ಬಲ ತುಂಬಲು ಕಾರ್ಯತಂತ್ರ ರೂಪಿಸಿದ್ದಾರೆ.
ಪುತ್ರ ರಾಕೇಶ್ ರಾಜಕೀಯ ಕನಸನ್ನು ಧವನ್ ಮೂಲಕ ಈಡೇರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಇದಕ್ಕೆಂದೇ ಮೊಮ್ಮಗನಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಮತ್ತು ಬರೆಯಲು ಕಲಿಸುವಂತೆ ಒಬ್ಬ ವಿಶೇಷ ಗುರುವನ್ನು ನೇಮಿಸಿದ್ದಾರೆ.
ಪರಿಣಿತರ ನೇಮಕ
ಕನ್ನಡ ಕಲಿಕೆ ಜೊತೆಗೆ ರಾಜಕೀಯ ಮೊಗ್ಗಲುಗಳನ್ನು ಹೇಳಿಕೊಡಲು ಪರಿಣಿತರ ನೇಮಕವಾಗಿದೆ.
ಪರಿಣಿತರ ಜೊತೆಗೆ ಬಿಡುವಿನ ಸಮಯದಲ್ಲಿ ಮೊಮ್ಮಗನೊಂದಿಗೆ ಆಟ-ಪಾಠದ ಜೊತೆ ರಾಜಕೀಯ ಮತ್ತು ಸಮಾಜದ ವ್ಯವಸ್ಥೆ ಕುರಿತು ತಿಳುವಳಿಕೆ ನೀಡುತ್ತಿದ್ದಾರೆ.
ತಾತನ ಜೊತೆ ಅಜ್ಜಿಯ ಜೊತೆಗೂ ಬೆರೆತು ಕನ್ನಕ ಕಲಿಕೆ ಹಾಗೂ ಇತರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

ಕೆನೆಡಿಯನ್ ಶಾಲೆಯಲ್ಲಿ ಶಿಕ್ಷಣ
ನಗರದ ಯಲಹಂಕ ಸಮೀಪದ ವಿದೇಶಿ ಮೂಲದ ಕೆನೆಡಿಯನ್ ಇಂಟರ್‌ನ್ಯಾಷನಲ್ ರೆಸಿಡೆಂನ್ಷಿಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಧವನ್ ರಾಕೇಶ್, ಇದೀಗ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಕೊನೆಯ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
ಐಶಾರಾಮಿ ಕೆನೆಡಿಯನ್ ಇಂಟರ್‌ನ್ಯಾಷನಲ್ ರೆಸಿಡೆಂನ್ಷಿಯಲ್ ಶಾಲೆಯಲ್ಲಿ ವಿದೇಶದ ವಿದ್ಯಾರ್ಥಿಗಳು, ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಶ್ರೀಮಂತರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಈ ಶಾಲೆಯಲ್ಲಿ ಕನ್ನಡದ ಗಂಧವೇ ಇಲ್ಲ, ಆದ್ದರಿಂದ, ಸಿದ್ದರಾಮಯ್ಯ ಮೊಮ್ಮಗನಿಗೆ ಈಗಲೂ ಸ್ಪಷ್ಟ ಕನ್ನಡ ಭಾಷೆಯ ಅರಿವಿಲ್ಲ.
ಕನ್ನಡ ಭಾಷೆ ಕಲಿಕೆ
ಮುಂಬರುವ ಚುನಾವಣೆ ವೇಳೆಗೆ ಮೊಮ್ಮಗನನ್ನು ಸಕ್ರಿಯ ರಾಜಕಾರಣಕ್ಕೆ ಇಳಿಸಲು ಪಣ ತೊಟ್ಟಿರುವ ಸಿದ್ದರಾಮಯ್ಯ, ಈಗಿನಿಂದಲೇ ಕನ್ನಡ ಭಾಷೆ ಜೊತೆಗೆ ರಾಜಕೀಯ ಶಿಕ್ಷಣವನ್ನೂ ನೀಡುತ್ತಿದ್ದಾರೆ.
ಕಾನೂನು ಪದವಿ ಮುಗಿಸುತ್ತಿದ್ದಂತೆ ಕೊನೆಯ ಒಂದು ವರ್ಷ ವರುಣಾ ವಿಧಾನಸಭಾ ಕ್ಷೇತ್ರದ ಮತದಾರರ ಜೊತೆಗೆ ಬೆರೆಯುವ, ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡು 2028ರಲ್ಲಿ ಹಸ್ತದ ಗುರುತಿನಡಿ ಕಣಕ್ಕಿಳಿಯಲು ಸಿದ್ಧರಾಗುತ್ತಿದ್ದಾರೆ.
ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ರಾಜಕೀಯದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ, ಒಂದು ವೇಳೆ ಅವರೂ ಚುನಾವಣಾ ಕಣಕ್ಕೆ ಇಳಿಯುವುದಾದರೆ, ಚಾಮುಂಡಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ದೊರಕಿಸುವ ಚಿಂತನೆ ನಡೆದಿದೆ.


