ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಂತ್ರಿಮಂಡಲವನ್ನು ಜುಲೈ 8ರಂದು ವಿಸ್ತರಿಸಿ 18 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ಸಂಪುಟಕ್ಕೆ ಸೇರ್ಪಡೆ ಆಗುವವರ ಪಟ್ಟಿಗೆ ಅನುಮತಿ ಪಡೆಯಲು ಜುಲೈ 2ರ ರಾತ್ರಿ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ, ಎರಡು-ಮೂರು ದಿನ ಅಲ್ಲೇ ಉಳಿಯಲಿದ್ದಾರೆ.
ಜುಲೈ 3ರಂದು ರಾಹುಲ್ ಭೇಟಿ
ವಿದೇಶ ಪ್ರವಾಸದಲ್ಲಿರುವ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ಗುರುವಾರ ತಡರಾತ್ರಿ ರಾಷ್ಟ್ರಕ್ಕೆ ಹಿಂತಿರುಗಲಿದ್ದು, ಜುಲೈ 3ರಂದು ಅವರನ್ನು ಮುಖ್ಯಮಂತ್ರಿ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚಿಸಿ ಪಟ್ಟಿಗೆ ಅನುಮೋದನೆ ಪಡೆಯಲಿದ್ದಾರೆ.
ರಾಹುಲ್ ಗಾಂಧಿ ಸೂಚನೆಯಂತೆ 50 ವರ್ಷದೊಳಗಿನವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸಂಭವನೀಯರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದಕ್ಕೆ ಅನುಮತಿ ಪಡೆಯಲಿದ್ದಾರೆ.
ರಾಹುಲ್ ಗಾಂಧಿ ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನೂ ಭೇಟಿ ಮಾಡಿ ಈ ಸಂಬಂಧ ಚರ್ಚೆ ಮಾಡಲಿದ್ದಾರೆ.
13 ಮಂದಿಯೊಂದಿಗೆ ಸಂಪುಟ ರಚಿಸಿದ್ದರು
ಜೂನ್ 3ರಂದು ಅಧಿಕಾರ ವಹಿಸಿಕೊಂಡ ಶಿವಕುಮಾರ್ ಅಂದು ತಮ್ಮ ಮಂತ್ರಿಮಂಡಲಕ್ಕೆ 13 ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದ್ದರು.
ಇನ್ನೂ 20 ಮಂದಿಗೆ ಮಂತ್ರಿಮಂಡಲ ಸೇರ್ಪಡೆಗೆ ಅವಕಾಶ ಇದ್ದು, ಪ್ರಸ್ತುತ 18 ಮಂದಿಗೆ ಅವಕಾಶ ನೀಡಿ ಇನ್ನೂ ಎರಡು ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಿದ್ದಾರೆ.
ಯುವಜನರಿಗೆ ಹೆಚ್ಚು ಅವಕಾಶ ನೀಡುವ ಮೂಲಕ ತಮ್ಮ ಸಂಪುಟವನ್ನು ಸ್ಫೂರ್ತಿಯುತಗೊಳಿಸುವ ಆಲೋಚನೆ ಹೊಂದಿದ್ದಾರೆ.
ಈ ಬಾರಿ ಯುವಜನರಿಗೆ ಅವಕಾಶ
ಅಧಿಕಾರ ವಹಿಸಿಕೊಳ್ಳುವ ವೇಳೆ ಹಿರಿಯರಿಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದ್ದ ಮುಖ್ಯಮಂತ್ರಿ, ಇದೀಗ ರಾಹುಲ್ ಗಾಂಧಿ ಸೂತ್ರವನ್ನು ವಿಸ್ತರಣೆ ಸಂದರ್ಭದಲ್ಲಿ ಅಳವಡಿಸಲಿದ್ದಾರೆ.
ಸಂಪುಟ ವಿಸ್ತರಣೆಗೆ ಅನುಮೋದನೆ ಪಡೆಯಲು ಮುಖ್ಯಮಂತ್ರಿ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಸಚಿವ ಆಕಾಂಕ್ಷಿಗಳ ದಂಡು ಮತ್ತೆ ಲಾಬಿ ಆರಂಭಿಸಿದೆ.
ಕೆಲವು ಮಾಜಿ ಸಚಿವರು ಹಾಗೂ ಪಕ್ಷದ ಶಾಸಕರ ದಂಡೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ, ತಮ್ಮನ್ನು ಮಂತ್ರಿ ಮಾಡಲು ಶಿಫಾರಸು ಮಾಡುವಂತೆ ಕೋರಿದ್ದಾರೆ.
ಸಿದ್ದರಾಮಯ್ಯ-ಡಾ.ಪರಮೇಶ್ವರ್ ಚರ್ಚೆ
ಸಿದ್ದರಾಮಯ್ಯ ಸಹಾ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚೆ ಮಾಡಿದರು ಎನ್ನಲಾಗಿದೆ.
ಶಿವಕುಮಾರ್ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಡಾ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದೆ.


