ಬೆಂಗಳೂರು: ಎಲ್ ನಿನೋ ಪ್ರಭಾವದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವಿದ್ಯುತ್ ಕಡಿತ ಇಲ್ಲವೆ ಲೋಡ್ ಶೆಡ್ಡಿಂಗ್ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಮುಂಬರುವ ಬೇಸಿಗೆಯಲ್ಲೂ ವಿದ್ಯುತ್ ಅಭಾವವಾಗದ ರೀತಿ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದಲ್ಲದೆ, ಹೆಚ್ಚುವರಿ ವಿದ್ಯುತ್ ಖರೀದಿಗೂ ಕ್ರಮ ಕೈಗೊಳ್ಳಲಾಗಿದೆ.
ಈ ಸಂಬAಧ ಪತ್ರಿಕಾ ಹೇಳಿಕೆ ನೀಡಿರುವ ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ ಮತ್ತು ಇಲಾಖಾ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಮಳೆ ಕೊರತೆಯಿಂದ ಜಲವಿದ್ಯುತ್ ಉತ್ಪಾದನೆಯಲ್ಲಿ ಪರಿಣಾಮ ಬೀರಬಹುದು. ಆದರೆ, ಸಮರ್ಪಕ ವಿದ್ಯುತ್ ಪೂರೈಕೆಗೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಜಲ ವಿದ್ಯುತ್ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಹಾಗಾಗಿ, ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಹೆಚ್ಚು ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ.
ಅದೇ ರೀತಿ ರಾಜ್ಯದಲ್ಲಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಹೆಚ್ಚಿಸಿ ಅದನ್ನು ಬಳಸಿಕೊಳ್ಳುವುದರ ಜೊಗತೆ ಕೋ-ಜನರೇಷನ್ ವಿದ್ಯುತ್ ಘಟಕಗಳಿಂದಲೂ ವಿದ್ಯುತ್ ಪಡೆಯಲು ಕ್ರಮ ತೆಗೆದುಕೊಳ್ಳಲಾಗುವುದು.
ಕೆಪಿಸಿಎಲ್ ವತಿಯಿಂದ ಉಷ್ಣ ವಿದ್ಯುತ್ ಸ್ಥಾವರಗಳ ಗರಿಷ್ಠ ಕಾರ್ಯನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಇದಕ್ಕೆ ಅಗತ್ಯ ಕಲ್ಲಿದ್ದಲು ದಾಸ್ತಾನು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಉಷ್ಣ ಮತ್ತು ಜಲ ವಿದ್ಯುತ್ ಸ್ಥಾವರಗಳ ನಿರ್ವಹಣಾ ಕಾರ್ಯಗಳನ್ನು ಆದ್ಯತೆ ಮತ್ತು ವ್ಯವಸ್ಥೆಯ ಅಗತ್ಯತೆಗೆ ಅನುಗುಣವಾಗಿ ಯೋಜಿಸುವುದು.

ಕೆಪಿಟಿಸಿಎಲ್ ವತಿಯಿಂದ 500 ಮೆ.ವ್ಯಾ. ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟೆಮ್ ಹಾಗೂ ಕ್ರೆಡಲ್ ಮೂಲಕ ಜೆಎಸ್‌ಡಬ್ಲೂಯನ 300 ಮೆ.ವ್ಯಾ. ಸೌರ ವಿದ್ಯುತ್ ಯೋಜನೆಗಳ ತ್ವರಿತ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುವುದು.
ಎಸ್ಕಾಂಗಳು ಮತ್ತು ಕ್ರೆಡಲ್ ವತಿಯಿಂದ ಕುಸುಮ್-ಬಿ ಮತ್ತು ಕುಸುಮ್-ಸಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತಗೊಳಿಸಿ ಶೀಘ್ರ ಅನುಷ್ಠಾನಗೊಳಿಸುವುದು. ಸಹ-ಉತ್ಪಾದನಾ ಘಟಕಗಳಿಂದ 500 ರಿಂದ 700 ಮೆ.ವ್ಯಾ. ವಿದ್ಯುತ್ ಖರೀದಿ ಪ್ರಕ್ರಿಯೆ ಆರಂಭಿಸಿದ್ದೇವೆ.
2026ರ ಅಕ್ಟೋಬರ್‌ಗೂ ಮುನ್ನ ಇತರೆ ರಾಜ್ಯಗಳೊಂದಿಗೆ ವಿದ್ಯುತ್ ಬ್ಯಾಂಕಿAಗ್ ವ್ಯವಸ್ಥೆಗಳನ್ನು ಆರಂಭಿಸುವುದು. ಇದರಲ್ಲಿ ರೌಂಡ್ ದ ಕ್ಲಾಕ್ (ಆರ್‌ಟಿಸಿ) ಹಾಗೂ ಪೀಕ್ ಅವರ್ ವಿದ್ಯುತ್ ಖರೀದಿಗೆ ಕ್ರಮವಹಿಸುವುದು.
ಪ್ರಕೃತಿ ವಿಕೋಪದ ನಡುವೆಯೂ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ. ಅದರಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಲೇ ಕೈಗೊಂಡಿದ್ದೇವೆ.
ಮಂದಿನ ವರ್ಷದ ಮೇ ಅಂತ್ಯದವರೆಗೆ ಸಮರ್ಪಕ ವಿದ್ಯುತ್ ಪೂರೈಸಲು ಅಗತ್ಯ ಸಿದ್ಧತೆಗಳನ್ನು ನಡೆಸಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ಮತ್ತು ನಮ್ಮ ಗ್ರಾಹಕರಿಗೆ ತೊಂದರೆಯಾಗದAತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ವಿದ್ಯುತ್ ಕಂಬ, ತಂತಿಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳು ಹಾನಿಗೊಳಗಾಗುತ್ತವೆ. ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ ಇದನ್ನು ತ್ವರಿತವಾಗಿ ಬಗೆಹರಿಸಿ ಪೂರೈಕೆ ಸುಗಮಗೊಳಿಸಲು ಸಿದ್ಧತೆಗಳನ್ನು ತ್ವರಿತಗೊಳಿಸುವಂತೆ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದಿದ್ದಾರೆ.


