ಡಿ.ಕೆ.ಶಿವಕುಮಾರ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಎಚ್ಚರಿಕೆ
ಬೆಂಗಳೂರು:ಬಿಡದಿ ಟೌನ್ಶಿಪ್ ಯೋಜನೆ ಕೈಬಿಡದಿದ್ದರೆ ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಡದಿ ಟೌನ್ಶಿಪ್ಗೆ ಸಂಬಂಧಿಸಿದಂತೆ ದಾಖಲೆಯ ಅಂಕಿ-ಅಂಶಗಳನ್ನು ಒಳಗೊಂಡ ಸುದೀರ್ಘ ಪತ್ರ ಬರೆದಿದ್ದು, ಮೂರ್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರೈತರ ಪರ ಧರಣಿ ಕುಳಿತುಕೊಳ್ಳುವುದು ಅನಿವಾರ್ಯ ಎಂದಿದ್ದಾರೆ.
ಉತ್ತರ ಕೊಡದೆ ನಿರ್ಲಕ್ಷ್ಯ
ನಾನು ಈಗ ಸಾಮಾನ್ಯ ಪ್ರಜೆ, ಲೋಕಸಭೆಯ ಯಾವುದೇ ಸದನದ ಸದಸ್ಯನಲ್ಲ, ಒಬ್ಬ ರೈತನ ಮಗನಾಗಿ ನಿಮಗೆ ಕಳೆದ ಕೆಲವು ದಿನಗಳ ಹಿಂದೆಯೇ ಪತ್ರ ಬರೆದಿದ್ದರೂ, ಅದಕ್ಕೆ ಸ್ವೀಕೃತಿ ಪತ್ರವನ್ನೂ ನೀಡದೆ, ಉತ್ತರವನ್ನೂ ಕೊಡದೆ ದಿವ್ಯ ನಿರ್ಲಕ್ಷ್ಯ ತೋರಿದ್ದೀರಿ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದ ಪ್ರತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ನನ್ನ 7 ದಶಕಗಳ ಸಾರ್ವಜನಿಕ ಜೀವನದಲ್ಲಿ ರಾಜ್ಯ ಮತ್ತು ದೇಶದ ರೈತರ ಹಿತಕ್ಕಾಗಿ ಶ್ರಮಿಸಿದ್ದೇನೆ, ಅಲ್ಲದೆ, ಅಧಿಕಾರ ತ್ಯಾಗ ಮಾಡಿದ್ದೇನೆ.
ರಾಜ್ಯ ಸರ್ಕಾರ ನನ್ನ ಮನವಿಯನ್ನು ತಿರಸ್ಕರಿಸಿದರೆ ಹಾಗೂ ರೈತರ ಕೂಗಿಗೆ ಕಿವಿಗೊಡದಿದ್ದರೆ, ನಿಮ್ಮ ಕಣ್ತೆರೆಸಲು ಧರಣಿ ಅನಿವಾರ್ಯ.
ಬೇರೆ ಮಾರ್ಗ ಕಂಡುಕೊಳ್ಳಿ
ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ನೀವು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಕಾಂಗ್ರೆಸ್ ವರಿಷ್ಠರಿಗೆ ಏನೋ ಭರವಸೆ ಕೊಟ್ಟಿದ್ದೀರಿ, ಅದನ್ನು ಈಡೇರಿಸಲು ನೀವು ಬೇರೆ ಮಾರ್ಗಗಳನ್ನು ಕಂಡುಕೊಳ್ಳಿ.
ಅದನ್ನು ಬಿಟ್ಟು ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ, ಮತ್ತೆ ನನ್ನನ್ನು ಧರಣಿ ಕುಳಿತುಕೊಳ್ಳುವಂತಹ ಸನ್ನಿವೇಶಕ್ಕೆ ದೂಡಬೇಡಿ ಎಂದು ಮುಖ್ಯಮಂತ್ರಿ ಅವರಿಗೆ ಕಿವಿಮಾತು ಹೇಳಿದ್ದಾರೆ.
ವರ್ಷಾನುಗಟ್ಟಲೆಯಿಂದ ಬಿಡದಿ ರೈತರು ಟೌನ್ಶಿಪ್ ಬೇಡ ಎಂದು ಹೋರಾಟ ನಡೆಸುತ್ತಿದ್ದಾರೆ, ಇದನ್ನು ಮನಗಂಡ ಸಿದ್ದರಾಮಯ್ಯ, ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರಲಿಲ್ಲ.

ನಾಯಕರ ತೃಪ್ತಿಪಡಿಸಲು ಯತ್ನ
ಆದರೆ, ನೀವು ಅಧಿಕಾರಕ್ಕೆ ಬರುತ್ತಿದ್ದಂತೆ ಈ ಕಾರ್ಯವನ್ನು ಕೈಗೆತ್ತಿಕೊಂಡು ಎಐಸಿಸಿ ನಾಯಕರನ್ನು ತೃಪ್ತಿಪಡಿಸಲು ಹೊರಟಂತಿದೆ.
ನಾಗರಿಕರಿಗೆ ನಿವೇಶನಗಳನ್ನು ಹಂಚುವ ಉದ್ದೇಶವೂ ಇದೆ ಎಂದಿದ್ದೀರಿ, ಆದರೆ, ಬಿಡಿಎ ನಿರ್ಮಾಣ ಮಾಡಿರುವ ಕೆಂಪೇಗೌಡ ಹಾಗೂ ಶಿವರಾಮ ಕಾರಂತ ಬಡಾವಣೆಗಳಲ್ಲಿ ಸಾವಿರಾರು ನಿವೇಶನಗಳು ಖರೀದಿ ಆಗದೆ ಹಾಗೇ ಉಳಿದಿವೆ.
ಇದೇ ಪರಿಸ್ಥಿತಿ ಗೃಹ ಮಂಡಳಿ ಕೈಗೆತ್ತಿಕೊಂಡಿರುವ ಬಡಾವಣೆಗಳಲ್ಲೂ ಇದೆ, ನಿರ್ಮಾಣ ಆಗಿರುವ ನಿವೇಶನಗಳೇ ಉಳಿದಿರುವಾಗ ಹೊಸ ನಗರದ ಸೃಷ್ಟಿ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.
ಎಫ್ಐಆರ್ ವಾಪಸ್ ಪಡೆಯಬೇಕು
ಬಿಡದಿ ರೈತರ ಮೇಲೆ ಕಳೆದ ಸೋಮಾವಾರ ಹೂಡಿರುವ ಎಫ್ಐಆರ್ಗಳನ್ನು ವಾಪಸ್ ಪಡೆಯಬೇಕು, ನೀವೂ ಅದೇ ಭಾಗದ ರೈತನ ಮಕ್ಕಳು, ಅವರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಿ.
ಅಲ್ಲಿ ಇರುವವರೆಲ್ಲಾ ಸಣ್ಣ ಹಿಡುವಳಿದಾರರು, ಇರುವ ಭೂಮಿಯಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ, ಅಂತಹ ಸೂರುಗಳ ಮೇಲೆ ಬಂಡೆ ಹಾಕಬೇಡಿ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರೂ, ಬಿಜೆಪಿ ಮುಖಂಡರೂ ಯೋಜನೆ ವಿರುದ್ಧ ಇದ್ದಾರೆ, ಸರ್ವೇ ಕಾರ್ಯ ನಿಲ್ಲಿಸಿರುವುದು ಸ್ವಾಗತಾರ್ಹ, ಆದರೆ, ಯೋಜನೆಯನ್ನೇ ಕೈಬಿಡಿ.
ಪ್ರಚೋದನೆ ಆರೋಪ ಬೇಡ
ನಿಮಗೆ ಪತ್ರ ಬರೆದಿದ್ದೇನೆ, ಆದರೆ, ನಾನಿನ್ನೂ ಹೋರಾಟದ ಹಾದಿಗೆ ಹೋಗಿಲ್ಲ, ಹೋದರೆ, ಪ್ರಚೋದನೆ ಕೊಟ್ಟರು ಎಂಬ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ.
ನಾನು ಈಗಲೂ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇನೆ, ಇದಕ್ಕೆ ಸ್ಪಂದಿಸದಿದ್ದರೆ, ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.


