ಬೆಂಗಳೂರು:ಚದುರಂಗದಾಟದ ತಂತ್ರಗಾರಿಕೆ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಇಂದು ಘೋಷಿಸಿದರು.
ನಾನು ಫುಟ್ ಬಾಲ್ ಆಡುವವನಲ್ಲ, ಚೆಸ್ ಆಡುವವನು, ಚುನಾವಣೆಯಲ್ಲಿ ತಂತ್ರಗಾರಿಕೆಯೇ ಮುಖ್ಯ, ಈ ಅಸ್ತ್ರ ಪ್ರಯೋಗದಿಂದ ನಾವು ಮತ್ತೆ ಆಡಳಿತ ಪಕ್ಷವಾಗಿ ಕೂರುತ್ತೇವೆ.
ಚುನಾವಣೆ ಎದುರಿಸುವುದು ಗೊತ್ತಿದೆ
ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬುದು ನನಗೆ ಗೊತ್ತಿದೆ, ತಂತ್ರಗಾರಿಕೆ ಹೆಣೆಯುವುದು ಮೈದಾನದಲ್ಲಿ ಅಲ್ಲ ಎಂದಿದ್ದಾರೆ.
ಸಂಪುಟದ ನೂತನ ಸದಸ್ಯರನ್ನು ಸದನಕ್ಕೆ ಪರಿಚಯ ಮಾಡಿಕೊಟ್ಟು, ಸುದೀರ್ಘವಾಗಿ ಮಾತನಾಡಿದ ಮುಖ್ಯಮಂತ್ರಿ, ಆಲೋಚನೆ, ಭರವಸೆ ಮತ್ತು ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಗುರಿ ಎಂದರು.
ಈ ಗುರಿ ಸಾಧನೆಗೆ ಸಂಪುಟದ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಮತ್ತು ಜನರ ಅಭಿವೃದ್ಧಿಗೆ ಟೀಂ ಕರ್ನಾಟಕವಾಗಿ ಕೆಲಸ ಮಾಡುತ್ತೇವೆ.
ಜನರ ತೀರ್ಪು ಒಪ್ಪಲೇಬೇಕು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಚುನಾವಣಾ ತೀರ್ಪು ಏನೇ ಬಂದರೂ ನಾವು ಒಪ್ಪಲೇಬೇಕು.
ಆದರೆ, ಈಗ ನನಗೆ ಸಿಕ್ಕಿರುವ ಅವಕಾಶದಲ್ಲಿ 224 ಶಾಸಕರು ನನ್ನ ದೃಷ್ಟಿಯಲ್ಲಿ ಒಂದೇ, ನಾನು ಮುಖ್ಯಮಂತ್ರಿ ಆಗಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ.
ಜನರ ಸೇವೆ ಮಾಡುವಾಗ ಎಲ್ಲರೂ ಒಂದಾಗಿ ಶ್ರಮಿಸಬೇಕು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ನಾನು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬಹುದು, ವಿರೋಧ ಪಕ್ಷಗಳವರು ಆಡಳಿತ ಪಕ್ಷದ ಜಾಗದಲ್ಲಿ ಕೂರಬಹುದು.
ರಾಜಕೀಯ ಚದುರಂಗದ ಆಟ
ಜನರ ತೀರ್ಮಾನವೇ ಅಂತಿಮ, ಅದರಂತೆ ನಾವು ನಡೆದುಕೊಳ್ಳಬೇಕು, ಆದರೆ, ಈ ತೀರ್ಮಾನಕ್ಕೂ ಮುನ್ನ ರಾಜಕೀಯ ಚದುರಂಗದ ಆಟ ಆಡಲೇಬೇಕು ಎಂದರು.
ನಾವು ಇಷ್ಟೂ ಜನ ಯಾರ ಮೇಲೂ ದ್ವೇಷ ಮಾಡದೇ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಂದಾಗಿ ಕೆಲಸ ಮಾಡಬೇಕು.
ಕೇಂದ್ರ ಸರ್ಕಾರದ ಸಚಿವರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಬಯಸುತ್ತೇವೆ, ನೀರಾವರಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಮಗೆ ಕೊಟ್ಟ ಸಹಕಾರಕ್ಕೆ ಅಭಿನಂದಿಸುತ್ತೇವೆ.
ಕುಮಾರಸ್ವಾಮಿ ಜೊತೆ ಕೆಲಸ ಮಾಡಲು ಸಿದ್ಧ
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದಲ್ಲಿ ಅತಿ ದೊಡ್ಡ ಖಾತೆ ಹೊಂದಿದ್ದಾರೆ, ರಾಜ್ಯದ ಜನರಿಗೆ ೨೫ ಸಾವಿರ ಉದ್ಯೋಗ ಕಲ್ಪಿಸಬಹುದು, ಅವರು ಎಲ್ಲಿ ಜಾಗ ಕೇಳುತ್ತಾರೋ ಅಲ್ಲಿ ಕೊಡೋಣ, ಎಷ್ಟೇ ಆದರೂ ನಮ್ಮ ನಾಡಿನ ಜನರಿಗೆ ಉದ್ಯೋಗ ಕಲ್ಪಿಸುವುದು ಮುಖ್ಯ ಅಲ್ಲವೇ, ಅವರು ನನ್ನ ಬಗ್ಗೆ ಎಷ್ಟೇ ಬೇಸರ ಹೊಂದಿದ್ದರೂ, ಅವರ ಜೊತೆಗೆ ಕೆಲಸ ಮಾಡಲು ನಾನು ಸಿದ್ಧ ಎಂದರು.
ಅಧಿಕಾರದಲ್ಲಿ ನಾವು ಎರಡನ್ನು ಸಂಪಾದಿಸಬಹುದು, ಒಂದು ಅತಿ ಹೆಚ್ಚು ಮಿತ್ರರು ಅಥವಾ ಅತಿ ಹೆಚ್ಚು ಶತ್ರುಗಳು, ನಾನು ಹೆಚ್ಚು ಸ್ನೇಹಿತರನ್ನು ಗಳಿಸಲು ಬಯಸುತ್ತೇನೆ, ಎಲ್ಲರಿಗೂ ನೆರವು ನೀಡಲು ಬಯಸುತ್ತೇನೆ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ.
ನನ್ನ 40 ವರ್ಷಗಳ ರಾಜಕೀಯದಲ್ಲಿ ಏಳು-ಬೀಳುಗಳನ್ನು ಕಂಡಿದ್ದು, ನನ್ನದೇ ಆದ ಅನುಭವದಲ್ಲಿ ಹೊಸ ಆಲೋಚನೆಗಳನ್ನು ಹೊಂದಿದ್ದೇನೆ, ನನ್ನ ಈ ಸ್ಥಾನದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲವಾಗುವಂತಾಗಬೇಕು, ಸಿದ್ದರಾಮಯ್ಯ ೮ ವರ್ಷ ಕೊಟ್ಟ ಭಾಗ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ.
ಮುತ್ಸದ್ಧಿಗಳು ಆಡಳಿತ ನಡೆಸಿದ್ದಾರೆ
ಎಸ್.ಆರ್.ಕಂಠಿ ಕಾಲದಿಂದ ಸಿದ್ದರಾಮಯ್ಯವರೆಗೆ ಅನೇಕ ರಾಜಕೀಯ ಮುತ್ಸದ್ಧಿಗಳು ಆಡಳಿತ ನಡೆಸಿದ್ದಾರೆ, ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಗುಂಡೂರಾವ್, ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ, ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಧರಂ ಸಿಂಗ್, ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರುಗಳ ಆಡಳಿತ ನೋಡಿದ್ದೇವೆ.
ನಾಡಿಗೆ ಎಲ್ಲರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ನಾನು ಯಾರನ್ನೂ ಟೀಕೆ ಮಾಡುವುದಿಲ್ಲ.
ಜೆ.ಎಚ್.ಪಟೇಲ್ ಹೃದಯ ಶ್ರೀಮಂತಿಕೆ
ಮುಖ್ಯಮಂತ್ರಿ ಆಗಿದ್ದ ಜೆ.ಎಚ್.ಪಟೇಲ್ ಹೃದಯ ಶ್ರೀಮಂತಿಕೆ ಬಹಳ ದೊಡ್ಡದು, ಬೇರೆಯವರ ಒತ್ತಡದಿಂದ ನನ್ನನ್ನು ಒಮ್ಮೆ ಬಂಧಿಸುವ ಸಂದರ್ಭ ಬಂದಾಗ, ನೀವು ಹೊರಗಡೆ ರಾಜಕೀಯ ಮಾಡಿಕೊಳ್ಳಿ, ನಿಮ್ಮ ರಾಜಕೀಯಕ್ಕೆ ಶಾಸಕನನ್ನು ಬಂಧಿಸುವುದಿಲ್ಲ ಎಂದಿದ್ದನ್ನು ಶಿವಕುಮಾರ್ ಸ್ಮರಿಸಿದರು.
ನಮ್ಮ ರಾಜಕಾರಣ ಏನೇ ಇದ್ದರು ರಸ್ತೆಯಲ್ಲಿರಲಿ, ನನಗೆ ಎಲ್ಲರೂ ಒಂದೇ, ಹಳೆಯದನ್ನೆಲ್ಲಾ ಮರೆತು, ಹೊಸ ಪಯಣದಲ್ಲಿ ಸಾಗೋಣ, ಇಡೀ ಪ್ರಪಂಚ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕ ಮುಖೇನ ನೋಡುತ್ತಿದೆ, ನಮ್ಮಲ್ಲಿರುವ ಜ್ಞಾನ, ಪ್ರತಿಭೆ, ಮಾನವ ಸಂಪನ್ಮೂಲ, ಪ್ರಕೃತಿ ಸಂಪತ್ತು ಬೇರೆ ರಾಜ್ಯಗಳಲ್ಲಿ ಇಲ್ಲ ಎಂದರು.


