ಇ.ಡಿ. ಅಧಿಕಾರಿಗಳ ಜೊತೆ ನಿರ್ದೇಶಕ ರಾಹುಲ್ ನವೀನ್ ಚರ್ಚೆ
ಬೆಂಗಳೂರು:ವಿದೇಶದಲ್ಲಿ ಬಂಡವಾಳ ಹೂಡಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬಂಧನದ ಭೀತಿ ಎದುರಾಗಿದೆ.
ದಕ್ಷಿಣ ಆಫ್ರಿಕಾದ ವಿವಿಧ ದೇಶಗಳಲ್ಲಿ ಅದಿರು ಗಣಿಗಾರಿಕೆ ಹಾಗೂ ಚಿನ್ನ ನಿಕ್ಷೇಪಗಳಲ್ಲಿ ಹೂಡಿಕೆ ಮಾಡಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಸಚಿವರ ಮನೆ ಮತ್ತು ಕಚೇರಿಗಳ ಮೇಲೆ ಸತತ 37 ಗಂಟೆಗಳ ದಾಳಿ ನಡೆಸಿ ಕೋಟ್ಯಂತರ ರೂ. ನಗದು ಹಾಗೂ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು.
ಪ್ರಭಾವೀ ಸಚಿವರ ವ್ಯವಹಾರ
ಪ್ರಭಾವೀ ಸಚಿವರು ನಡೆಸಿರುವ ವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಗೋವಾದ ಇ.ಡಿ. ಅಧಿಕಾರಿಗಳು ಕೇಂದ್ರ ಕಚೇರಿಗೆ ವರದಿ ಸಲ್ಲಿಸುತ್ತಿದ್ದಂತೆ ಇ.ಡಿ. ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ತಂಡವೇ ನಗರಕ್ಕೆ ಧಾವಿಸಿತು.
ಗಣೇಶ ಚತುರ್ಥಿ ದಿನದಂದೇ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕರ್ನಾಟಕ ಮತ್ತು ಗೋವಾದ ಹಿರಿಯ ಇ.ಡಿ. ಅಧಿಕಾರಿಗಳ ಜೊತೆ ನಿರ್ದೇಶಕ ರಾಹುಲ್ ನವೀನ್, ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಇಡೀ ದಿನ ಚರ್ಚೆ ನಡೆಸಿ, ಇದೆಲ್ಲಾ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ಆದೇಶ ಮಾಡಿದ್ದಾರೆ.
ಕೋಲಾರ ಹಾಲು ಉತ್ಪಾದಕರ ಸಂಘದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಶಾಸಕ ಕೆ.ವೈ.ನಂಜೇಗೌಡ, ಕೆ.ಎನ್.ರಾಜಣ್ಣ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿನ ಅಕ್ರಮ ಆರೋಪ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಕೆ.ಸಿ.ವೀರೇಂದ್ರ (ಪಪ್ಪಿ), ಮೈಸೂರಿನ ಮುಡಾ, ಮಹರ್ಷಿ ವಾಲ್ಮೀಕಿ ಹಗರಣ, ಇತ್ತೀಚಿನ ಸತೀಶ್ ಜಾರಕಿಹೊಳಿ ಪ್ರಕರಣ ಸೇರಿದಂತೆ ಒಟ್ಟು 13 ಪ್ರಭಾವೀ ವ್ಯಕ್ತಿಗಳ ಪ್ರಕರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಿಸಿಲ್ಲ ಎಂದು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ವಿಚಾರಣೆ ತೀವ್ರಗೊಳಿಸಲಿಲ್ಲ
ಮುಡಾ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪ್ರಶ್ನಿಸುವಲ್ಲಿನ ವಿಳಂಬ, ವೀರೇಂದ್ರ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ತೀವ್ರಗೊಳಿಸಲಿಲ್ಲ, ನಂಜೇಗೌಡ ವಿರುದ್ಧದ ಪ್ರಕರಣವೂ ತೀವ್ರಗೊಂಡಿಲ್ಲ ಎಂಬ ಬಗ್ಗೆಯೂ ಪ್ರಶ್ನಿಸಿದರು ಎನ್ನಲಾಗಿದೆ.
ತನಿಖಾ ಸಂಸ್ಥೆಯ ಕಾರ್ಯವೈಖರಿ ಕುರಿತು ರಾಜ್ಯ ಸರ್ಕಾರದ ಸಚಿವರೊಬ್ಬರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ದಿಟ್ಟ ಹೆಜ್ಜೆ ಇಡಬೇಕು.

2,000 ಕೋಟಿ ರೂ. ವಹಿವಾಟು
ಸಚಿವ ಜಾರಕಿಹೊಳಿ ತಮ್ಮ ವಹಿವಾಟು 2,000 ಕೋಟಿ ರೂ. ಎಂಬುದಾಗಿ ಹೇಳಿಕೊಂಡಿದ್ದು, ಲೆಕ್ಕ ತೋರಿಸಿರುವುದು 170 ರಿಂದ 180 ಕೋಟಿ ರೂ. ಮಾತ್ರ.
ಸಚಿವರಾದ ನಂತರ ಕಳೆದ ಮೂರೂವರೆ ವರ್ಷಗಳಲ್ಲಿ ಇಲಾಖೆಯಲ್ಲಿ ಗುತ್ತಿಗೆ ನೀಡಿಕೆಯಲ್ಲಿನ ಭ್ರಷ್ಟಾಚಾರ ಆರೋಪ ಕುರಿತು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅಕ್ರಮ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ ದಾಖಲಾತಿ ತೀವ್ರ ಪರಿಶೀಲಿಸಿ, ಫೆಮಾ ಸೇರಿದಂತೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪಿಎಂಸಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿ.
ವಶಕ್ಕೆ ಪಡೆದು ತನಿಖೆ ನಡೆಸಿ
ಅಗತ್ಯ ಕಂಡುಬಂದರೆ ವಶಕ್ಕೆ ಪಡೆದು ತನಿಖೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ನಾನು ಇತ್ತೀಚೆಗೆ ನಿರ್ದೇಶಕ ಹುದ್ದೆಯಿಂದ ನಿವೃತ್ತಿ ಆಗುವ ಮುಂಚೆ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಪರಿಶೀಲನಾ ಸಭೆ ನಡೆಸಿದ್ದೆ, ಕೇಂದ್ರ ಸರ್ಕಾರ ನನ್ನ ಸೇವೆ ವಿಸ್ತರಿಸಿದ ಬೆನ್ನಲ್ಲೇ ಕರ್ನಾಟಕದಲ್ಲಿ ಸಭೆ ನಡೆಸುತ್ತಿದ್ದೇನೆ.
ನಾನು ಸಂಗ್ರಹಿಸಿರುವ ಮತ್ತು ನೀವು ನೀಡಿರುವ ಮಾಹಿತಿಯಂತೆ ಹಲವು ಪ್ರಕರಣಗಳಲ್ಲಿ ಪ್ರಭಾವಿಗಳ ಶಾಮೀಲು ಕಂಡುಬರುತ್ತಿದೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗಬೇಕು ಎಂದಿದ್ದಾರೆ.


