ಬೆಂಗಳೂರು:ದೀಪಾವಳಿ ಹಬ್ಬ ಆಚರಣೆ ವೇಳೆ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ನಿಗದಿತ ಸಮಯ ಮೀರಿ ಪಟಾಕಿ ಸಿಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಇಂದಿಲ್ಲಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಂದ ಉಂಟಾಗುವ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಈ ನಿಯಮ ಅನಿರ್ವಾಯ ಎಂದಿದ್ದಾರೆ.
ಸುಪ್ರೀಂ ಕೋರ್ಟ್-ಹೈಕೋರ್ಟ್ ಆದೇಶ
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅನ್ವಯ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ, ಇದನ್ನು ಅಧಿಕಾರಿಗಳು ಯಥಾವತ್ತಾಗಿ ಪಾಲಿಸಬೇಕು.
ಜಿಲ್ಲಾಧಿಕಾರಿ ಮತ್ತು ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾರ್ವಜನಿಕರು ಈ ನಿಯಮ ಉಲ್ಲಂಘಿಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಿ.
ಜಿಲ್ಲಾಡಳಿತ, ಹಬ್ಬಕ್ಕೂ ಮುನ್ನವೇ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು, ಸಾರ್ವಜನಿಕರೂ ಸಹಾ ಸರ್ಕಾರದ ನಿರ್ಧಾರಗಳಿಗೆ ಸಹಕರಿಸಿ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿಬೇಕು ಎಂದು ಮನವಿ ಮಾಡಿದರು.
ಗೋದಾಮುಗಳಿಗೆ ತೆರಳಿ ಪರಿಶೀಲಿಸಿಬೇಕು
ನ್ಯಾಯಾಲಯದ ಆದೇಶದಂತೆ ಹಸಿರು ಪಟಾಕಿಗಳಿಗೆ ಮಾತ್ರ ಮನ್ನಣೆ ನೀಡಿ, ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಉಂಟುಮಾಡುವ ಪಟಾಕಿಗಳ ಬಗ್ಗೆ ಅಧಿಕಾರಿಗಳು ಗೋದಾಮುಗಳಿಗೆ ತೆರಳಿ ಪರಿಶೀಲಿಸಿಬೇಕು ಎಂದರು.
ಚಿಕ್ಕಮಕ್ಕಳಿಗೆ ಪಟಾಕಿ ಸಿಡಿಸುವ ಆಸೆ ಇರುತ್ತದೆ. ನಾವೂ ಚಿಕ್ಕವರಿದ್ದಾಗ ಪಟಾಕಿ ಸಿಡಿಸುತ್ತಿದ್ದೆವು, ಆದರೆ ಇತ್ತೀಚಿನ ದಿನಗಳಲ್ಲಿ ಪಟಾಕಿಗಳ ಬಳಕೆ ಹೆಚ್ಚಾಗಿದ್ದು, ಇದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಸೂಚನೆ
ಪಟಾಕಿಗಳ ತಯಾರಿಕೆಯಲ್ಲಿ ಮೆಟಲ್, ಅಲ್ಯೂಮಿನಿಯಂ ಸೇರಿದಂತೆ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತಿದೆ, ಇದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ, ಕೇಂದ್ರ ಸರ್ಕಾರ ಹಸಿರು ಪಟಾಕಿಗಳ ಬಳಕೆಗೆ ಸೂಚನೆ ನೀಡಿದೆ, ಹಸಿರು ಪಟಾಕಿಗಳಿಂದಲೂ ಶೇ.30ರಷ್ಟು ಮಾತ್ರ ಮಾಲಿನ್ಯ ನಿಯಂತ್ರಿಸಲು ಸಾಧ್ಯ ಎಂದರು.
ಪಕ್ಷಿ ಗಣತಿ ಪೂರ್ಣಗೊಂಡ ಬಳಿಕ ಲಭ್ಯವಾಗುವ ಅಂಕಿ-ಅಂಶಗಳ ಆಧಾರದ ಮೇಲೆ ಮಾಹಿತಿ ನೀಡಲಾಗುವುದು, ಕಾರ್ಯಕ್ರಮದ ಮೂಲಕ ಪಕ್ಷಿಗಳ ವೈವಿಧ್ಯತೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವ ಇದಾಗಿದೆ ಎಂದರು.
ಎಲ್ಲಾ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿನ್ನೆಯಿರುತ್ತದೆ ಹಾಗೂ ಕ್ಯೂಆರ್ ಕೋಡ್ ಇರುತ್ತದೆ, ಚಿಹ್ನೆ ಬಗ್ಗೆ ಸಂಬಂಧಪಟ್ಟ ಜಿಲ್ಲೆಯ ಪರಿಸರ ಅಧಿಕಾರಿಗಳಿಂದ ಖಚಿತ ಪಡಿಸಿಕೊಳ್ಳಬೇಕು, ಚಿನ್ನ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯೆನಿಸುವುದಿಲ್ಲ ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು
ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗು ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು.
ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ, ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸ್ಫೋಟಿಸುವಂತಿಲ್ಲ ಅಥವಾ ಬಳಸುವಂತಿಲ್ಲ.
ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ನಿಷೇಧಿತ ಪಟಾಕಿಗಳ ಸಾಗಾಟ ಮಾಡುತ್ತಿದ್ದಲ್ಲಿ ಕೂಡಲೆ ವಾಣಿಜ್ಯ ತೆರಿಗೆ ಇಲಾಖೆ ರಾಜ್ಯದ ಗಡಿಗಳಲ್ಲಿರುವ ತಮ್ಮ ತನಿಖಾ ಠಾಣೆಗಳ ಮುಖಾಂತರ ನಿಷೇಧಿತ ಪಟಾಕಿ ಹಾಗೂ ಸಂಬಂಧಿತ ವಸ್ತುಗಳನ್ನು, ಸಾಗಾಟ ಮಾಡುವ ವಾಹನವನ್ನು ಸಾರಿಗೆ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.


