ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ತನಿಖಾಧಿಕಾರಿಗಳ ಮೇಲೆ ಒತ್ತಡ ತರುತ್ತಿದೆ.
ಕುಮಾರಸ್ವಾಮಿ ಮಾರ್ಗದರ್ಶನದಂತೆ ಅವರ ಕಚೇರಿ ಹುಡುಗರು ಸ್ಟಿಂಗ್ ಆಪರೇಷನ್ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಕಳಂಕ ತಂದಿದ್ದಾರೆ, ಇದರ ರೂವಾರಿ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿ, ಬಂಧಿಸಿ ನಂತರ ಬಿಡುಗಡೆ ಮಾಡಿ ಎಂಬ ಒತ್ತಡ ಹೇರಲಾಗುತ್ತಿದೆ.
ತನಿಖಾಧಿಕಾರಿಗಳಿಗೆ ಸರ್ಕಾರದ ಒತ್ತಡ
ಸರ್ಕಾರದ ಒತ್ತಡ ತನಿಖಾಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ, ಬಂಧಿಸಿ ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ, ಅವರ ಪಕ್ಷದ ಮತ್ತು ಕಚೇರಿಯ ಕೆಲವು ಹುಡುಗರನ್ನು ಈಗಾಗಲೇ ಕರೆಸಿ ವಿಚಾರಣೆ ನಡೆಸಿ, ಬಿಡುಗಡೆ ಮಾಡಲಾಗಿದೆ.
ಇವರಲ್ಲಿ ಒಂದಿಬ್ಬರು ಮಾತ್ರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ, ಉಳಿದವರು ನ್ಯಾಯಲಯದ ಮಟ್ಟಿಲು ಏರಿಲ್ಲ, ಕೇಂದ್ರ ಸಚಿವರನ್ನು ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ತನಿಖಾಧಿಕಾರಿಗಳು ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಒತ್ತಡಕ್ಕೆ ಮಣಿದು ನಗರ ಪೋಲಿಸ್ ಆಯುಕ್ತರೇ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿ ನಂತರ ಗೊಂದಲಕ್ಕೆ ಸಿಲುಕಿದ್ದಾರೆ, ಇವರ ಹೇಳಿಕೆ ನಂತರ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವರು ಎಚ್ಚರಿಕೆ ನೀಡಿ, ಇದು ಹೀಗೇ ಮುಂದುವರೆದರೆ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಯೋಗಾಲಯದ ವರದಿ ಬಂದಿಲ್ಲ
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಡಿ. ನೈಜತೆ ಕುರಿತು ಇನ್ನೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಸಾಕ್ಷ್ಯಾಧಾರಗಳು ದೊರೆತಿಲ್ಲ, ಇಂತಹ ಸನ್ನಿವೇಶದಲ್ಲಿ ಯಾವುದೇ ದಾಖಲೆ ಇಲ್ಲದೆ, ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಒಳಪಡಿಸುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ದೆಹಲಿಯಿಂದ ದೂರವಾಣಿ ಮೂಲಕ ಸಂಪರ್ಕಿಸಿ ರಾಜ್ಯ ಸರ್ಕಾರದ ಒತ್ತಡ ಕುರಿತು ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ, ನೋಟಿಸ್ ನೀಡಿ, ಕರೆಸಿ, ಬಂಧಿಸಲಿ ನಂತರ ನನ್ನ ತಾಕತ್ತನ್ನೂ ತೋರಿಸುತ್ತೇನೆ ಎಂದು ತೊಡೆತಟ್ಟಿ ನಿಂತಿದ್ದಾರೆ.
ಸೂತ್ರದಾರರನ್ನು ಬಂಧಿಸುವಂತೆ ಸಿದ್ದರಾಮಯ್ಯ ಆಗ್ರಹ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸ್ಟಿಂಗ್ ಸೂತ್ರದಾರರನ್ನು ಬಂಧಿಸುವಂತೆ ಸಿದ್ದರಾಮಯ್ಯ ಅವರೇ ತಮ್ಮ ಪಕ್ಷದ ಹೈಕಮಾಂಡ್ ಅನ್ನು ಆಗ್ರಹಿಸಿದ್ದಾರೆ, ನಾನೂ ಅದನ್ನೇ ಹೇಳುತ್ತಿರುವುದು ಎಂದರು.
ಆದರೆ, ಅದನ್ನು ಬಿಟ್ಟು ತನಿಖೆ ದಾರಿ ತಪ್ಪಿಸಲಾಗುತ್ತಿದೆ, ಅದನ್ನು ಸರಿಪಡಿಸಿಕೊಳ್ಳ್ರಪ್ಪ ಅಂತ ಹೇಳ್ತಾ ಇದ್ದೀನಿ, ಎಂತ ದರಿದ್ರ ಈ ರಾಜ್ಯಕ್ಕೆ ಬಂತು, ಇದೇನಾದರೂ ಮುಂದುವರೆದರೆ, ರಾಜ್ಯ ಏನಾಗುತ್ತೆ ಅರ್ಥ ಮಾಡಿಕೊಳ್ಳ್ರಪ್ಪ ಅಂತ ಹೇಳ್ತಾ ಇದ್ದೀನಿ.
ಇವತ್ತು ಸಿದ್ದರಾಮಯ್ಯನವರನ್ನು ಮುಗಿಸಿ, ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ, ಅದರ ಫಲ 2028ರ ವಿಧಾನಸಭಾ ಚುನಾವಣೆಯಲ್ಲಿ ಗೊತ್ತಾಗುತ್ತೆ ಎಂದರು.


