ಒಂದರ ಹಿಂದೆ ಒಂದು ರೈಲು ಓಡಿಸಲು ರೈಲ್ವೆ ಮಂಡಳಿ ತೀರ್ಮಾನ
ಬೆಂಗಳೂರು: ವಾಣಿಜ್ಯ ನಗರವಾಗಿ ಪರಿವರ್ತನೆ ಆಗುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಇನ್ನು ಮುಂದೆ ಪ್ರತಿ 10 ನಿಮಿಷಕ್ಕೆ ಒಂದು ರೈಲು ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ.
ಮೆಟ್ರೊ ಮಾದರಿ ಈ ಉಭಯ ನಗರಗಳ ನಡುವೆ ಒಂದರ ಹಿಂದೆ ಒಂದು ರೈಲು ಓಡಿಸಲು ನಿರ್ಧರಿಸಿದೆ.
ಜೋಡಿ ಮಾರ್ಗ ನಾಲ್ಕು ಮಾರ್ಗಗಳಾಗಿ ಪರಿವರ್ತನೆ
ಇದಕ್ಕಾಗಿ ಉಭಯ ನಗರಗಳ ನಡುವೆ ಇರುವ ಜೋಡಿ ಮಾರ್ಗವನ್ನು ನಾಲ್ಕು ಮಾರ್ಗಗಳಾಗಿ ಪರಿವರ್ತಿಸಲು ಮಂಡಳಿ ತೀರ್ಮಾನಿಸಿದೆ.
ರೈಲು ಮಾರ್ಗ ಅಭಿವೃದ್ಧಿ ಪಡಿಸಲು ಮಂಡಳಿ ತೀರ್ಮಾನ ಕೈಗೊಂಡಿರುವುದರಿಂದ ಮೈಸೂರು ಮತ್ತು ತುಮಕೂರಿಗೆ ಸಬ್ ಅರ್ಬನ್ ರೈಲು ಸಂಚಾರದ ಅವಶ್ಯಕತೆ ಇಲ್ಲ ಎಂದು ಮಂಡಳಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ತುಮಕೂರು, ದೊಡ್ಡಬಳ್ಳಾಪುರ, ಬಂಗಾರಪೇಟೆ ಸೇರಿದಂತೆ ರಾಜಧಾನಿಗೆ ಸಮೀಪವಿರುವ ನಗರ-ಪಟ್ಟಣಗಳಿಗೆ ಸಬ್ ಅರ್ಬನ್ ರೈಲು ಯೋಜನೆ ಅನುಷ್ಟಾನಕ್ಕೆ ಮೂಲಸೌಕರ್ಯ ಇಲಾಖೆ ನಿರ್ಧರಿಸಿತು.
ಕರ್ನಾಟಕ ರೈಲು ಅಭಿವೃದ್ಧಿ ನಿಗಮ (ಕೆ-ರೈಡ್) ಮೂಲಕ ಸಬ್ ಅರ್ಬನ್ ರೈಲು ಯೋಜನೆಯನ್ನು ಕೇಂದ್ರ ರೈಲ್ವೆ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿ ಮಂಡಳಿಯ ಅನುಮತಿ ಕೋರಿತ್ತು.
ಇದೇ ಕಾಲಕ್ಕೆ ಮೈಸೂರು, ಕೈಗಾರಿಕಾ ಮತ್ತು ವಾಣಿಜ್ಯ ನಗರವಾಗಿ ಅಭಿವೃದ್ಧಿಗೊಳ್ಳುತ್ತಿರುವುದರಿಂದ ಸುಗಮ ಸಂಚಾರಕ್ಕಾಗಿ ಸಬ್ ಅರ್ಬನ್ ರೈಲು ಯೋಜನೆಗೆ ಅನುಮತಿ ನೀಡುವಂತೆ ಮಂಡಳಿಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು.
ಜೋಲಾರ್‌ಪೇಟೆ-ಬೆಂಗಳೂರು-ಮೈಸೂರು, ತುಮಕೂರು-ಬೆಂಗಳೂರು-ಮೈಸೂರು ನಡುವೆ ದ್ವಿಪಥ ಮಾರ್ಗವನ್ನು ನಾಲ್ಕು ಮಾರ್ಗವಾಗಿ ಪರಿವರ್ತಿಸುತ್ತಿದ್ದೇವೆ.
ಪರಿವರ್ತನೆ ನಂತರ ಈ ನಗರಗಳ ನಡುವೆ ಪ್ರತಿ 10 ನಿಮಿಷಕ್ಕೆ ಅಂದರೆ, ಒಂದರ ಹಿಂದೆ ಒಂದು ರೈಲಿನ ಸಂಚಾರ ಇರುತ್ತದೆ.
ಉದಾಹರಣೆಗೆ ಬೆಂಗಳೂರು-ಮೈಸೂರು ನಡುವೆ ರೈಲುಗಳು ಎರಡೆರಡು ಮಾರ್ಗಗಳಲ್ಲಿ ಸಂಚರಿಸಲಿದ್ದು, ಇದರಿಂದ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಹಾಲಿ ಮಾರ್ಗದ ಪಕ್ಕದಲ್ಲೇ ಹೊಸ ಮಾರ್ಗಗಳ ನಿರ್ಮಾಣ

ಹಾಲಿ ಮಾರ್ಗದ ಪಕ್ಕದಲ್ಲೇ ಹೊಸ ಮಾರ್ಗಗಳು ನಿರ್ಮಾಣವಾಗಲಿವೆ ಎಂದು ಮಂಡಳಿ ಸರ್ಕಾರಕ್ಕೆ ಮಾಹಿತಿ ನೀಡಿರುವುದಲ್ಲದೆ, ಈ ಮಾರ್ಗಗಳ ವಿದ್ಯುದೀಕರಣ ಕಾರ್ಯ ಪೂರ್ಣಗೊಳ್ಳಲಿದೆ.
ಮೈಸೂರು-ಚಾಮರಾಜನಗರ ನಡುವೆ ಡಬ್ಲಿಂಗ್ ಕಾರ್ಯವನ್ನು ಕೈಗೆತ್ತಿಕೊಳ್ಳಲು ಮಂಡಳಿ ತೆಗೆದುಕೊಂಡಿರುವ ತೀರ್ಮಾನವನ್ನು ಸರ್ಕಾರಕ್ಕೆ ತಿಳಿಸಿದೆ.
ಉಭಯ ನಗರಗಳ ನಡುವೆ ಪ್ರಸ್ತುತ ಸರಿಸುಮಾರು ಪ್ರತಿ ಗಂಟೆಗೆ ಒಂದು ರೈಲು ಇದ್ದು, ಪ್ರಯಾಣಿಕರ ದಟ್ಟಣೆ ಸಂದರ್ಭದಲ್ಲಿ ಪ್ರತಿ 20-30 ನಿಮಿಷಕ್ಕೆ ರೈಲುಗಳು ಸಂಚರಿಸುತ್ತಿವೆ.
ಆದರೂ ಒತ್ತಡ ಹೆಚ್ಚಿದೆ, ನಾಲ್ಕು ಮಾರ್ಗಗಳಾದ ನಂತರ ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಾಣಿಕೆಗೂ ಹೆಚ್ಚು ಒತ್ತು ಕೊಡುವುದರಿಂದ ಕೈಗಾರಿಕಾ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಮಂಡಳಿ ತಿಳಿಸಿದೆ.


