ಬೆಂಗಳೂರು:ಜಲಾಶಯಗಳಲ್ಲಿನ ಸಂಗ್ರಹಿತ ನೀರನ್ನು ಮುಂಬರುವ ಬೇಸಿಗೆ ಅಂತ್ಯದವರೆಗೆ ಕುಡಿಯಲು ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ಮೊದಲ ಆದ್ಯತೆ ನೀಡುವಂತೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಕಟ್ಟಾದೇಶ ಮಾಡಿದ್ದಾರೆ.
ಕೃಷ್ಣಾ ಜಲಾನಯನ ಪ್ರದೇಶ ಹೊರತುಪಡಿಸಿ ಮುಂಗಾರು ಮಳೆ ವೈಫಲ್ಯದಿಂದ ಜಲಾಶಯಗಳ ನೀರಿನ ಮಟ್ಟ ಶೇಕಡಾ 60-70ರಷ್ಟೂ ಸಂಗ್ರಹವಾಗಿಲ್ಲ.
ರೈತರಿಗೆ ಸಹಕಾರಿ
ಇದನ್ನು ಗಮನದಲ್ಲಿ ಇಟ್ಟುಕೊಂಡು ಸಂಗ್ರಹಿತ ನೀರನ್ನು ಕುಡಿಯಲು ಮತ್ತು ಕೆರೆ ಕಟ್ಟೆಗಳ ಭರ್ತಿಗೆ ಬಳಕೆ ಮಾಡಿದರೆ ರೈತರಿಗೆ ಸಹಕಾರಿ ಆಗಲಿದೆ ಎಂದರು.
ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ನೀರಿನ ಸಂಗ್ರಹ ತೀರಾ ಕಡಿಮೆಯಾಗಿದೆ.
ಇರುವ ನೀರನ್ನು ಕುಡಿಯಲು, ಕರೆಗಳ ಭರ್ತಿ ಹಾಗೂ ಕಡಿಮೆ ನೀರು ಬಳಕೆ ಕೃಷಿಗೆ ಅವಕಾಶ ಮಾಡಿಕೊಡಬೇಕು.
ಭತ್ತ, ಕಬ್ಬು ಬೆಳೆ ಬೇಡ
ಯಾವುದೇ ಕಾರಣಕ್ಕೂ ಈ ಭಾಗದ ರೈತರು ಭತ್ತ ಮತ್ತು ಕಬ್ಬು ಬೆಳೆಯುವುದಕ್ಕೆ ಮುಂದಾಗದಂತೆ ತಿಳಿಹೇಳಬೇಕು, ಕಾವೇರಿ ನೀರಾವರಿ ನಿಗಮದ ಯೋಜನೆಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು.
ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಲೆಕ್ಕಾಚಾರ ಹಾಕುವ ಬದಲು, ನೇರವಾಗಿ ಕ್ಷೇತ್ರಕ್ಕೆ ತೆರಳಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಕೆಲಸ ಮಾಡದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾವೇರಿ ಜಲಾಶಯಗಳಲ್ಲಿನ ನೀರಿನ ಪ್ರಮಾಣ, ಡೆಡ್ ಸ್ಟೋರೇಜ್, ತಮಿಳುನಾಡಿಗೆ ಹರಿಸಿದ ನೀರು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ನೀಡಬೇಕು.
ಅಣೆಕಟ್ಟೆಗಳ ತಕ್ಷಣ ದುರಸ್ತಿ
ನಿಗಮದ ವ್ಯಾಪ್ತಿಯ 23 ಸಣ್ಣ ಅಣೆಕಟ್ಟುಗಳ ಪೈಕಿ 800 ವರ್ಷ ಹಳೆಯದಾದ ಮಂದಗೆರೆ ಹಾಗೂ ಹೇಮಗಿರಿ ಅಣೆಕಟ್ಟುಗಳು ಶಿಥಿಲವಾಗಿದ್ದು, ತಕ್ಷಣ ದುರಸ್ತಿ ಮಾಡಬೇಕು, ಹೇಮಾವತಿ ನೀರನ್ನು ಕುಣಿಗಲ್ ಮಾರ್ಗವಾಗಿ ಹುಲಿಯೂರುದುರ್ಗದವರೆಗೆ ಹರಿಸಲು ಬಾಕಿ ಇರುವ 32 ಕಿ.ಮೀ ಕಾಮಗಾರಿ ಪೂರ್ಣಗೊಳಿಸಬೇಕು.
ಕಳೆದ ಐದು ವರ್ಷಗಳಲ್ಲಿ 112.88 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ಸಮುದ್ರ ಪಾಲಾಗಿದೆ, ಬರಗಾಲದಲ್ಲೂ ಎರಡು ರಾಜ್ಯಗಳಿಗೆ ಅನುಕೂಲವಾಗುವ ಹಾಗೂ ಕನಿಷ್ಠ 22 ಟಿಎಂಸಿ ಕುಡಿಯುವ ನೀರು ಸಂಗ್ರಹಿಸಲು ಮೇಕೆದಾಟು ಯೋಜನೆಯೊಂದೇ ಶಾಶ್ವತ ಪರಿಹಾರವಾಗಿದೆ.
ತಮಿಳುನಾಡು ಕೇಳಿದ್ದ ಪ್ರಶ್ನೆಗಳಿಗೆ ಎಸ್‌ಒಪಿ ಕಳುಹಿಸಿ ಗೊಂದಲ ಬಗೆಹರಿಸಲಾಗಿದೆ, ಕೇಂದ್ರ ಜಲ ಆಯೋಗವೂ ಸಕಾರಾತ್ಮಕವಾಗಿ ಸ್ಪಂದಿಸಿದೆ, ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಜಲಶಕ್ತಿ ಸಚಿವರ ಭೇಟಿ ಮಾಡಿ, ರಾಜ್ಯದ ಎಲ್ಲಾ ಸಂಸದರ ಸಹಕಾರದೊಂದಿಗೆ ಪ್ರಧಾನಿ ಅವರಿಗೆ ಯೋಜನೆಯ ಲಾಭ ಮನವರಿಕೆ ಮಾಡಿಕೊಡಲಾಗುವುದು.
ಪರ್ಯಾಯ ಭೂಮಿ
ಮುಳುಗಡೆ ಪ್ರದೇಶಕ್ಕೆ ಪರ್ಯಾಯ ಭೂಮಿ ಲಭ್ಯವಾದ ತಕ್ಷಣ ಅಣೆಕಟ್ಟೆ ಕಾಮಗಾರಿ ಆರಂಭಿಸಿ ಮೂರು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಇದೆ.
ಅಭಿವೃದ್ಧಿಯಲ್ಲಿ ತಾರತಮ್ಯ ಸಲ್ಲದು, ರಾಜಕೀಯ ಒತ್ತಡಕ್ಕೆ ಮಣಿಯದೆ ಎಲ್ಲಾ ಶಾಸಕರಿಗೂ ತಲಾ ಎರಡರಿಂದ ಮೂರು ನೀರಾವರಿ ಕಾಮಗಾರಿ ನೀಡಲಾಗುವುದು.
ಹಾರಂಗಿ, ಕಬಿನಿಯ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಶ್ರೀರಂಗ ಏತ ನೀರಾವರಿ ಯೋಜನೆಯ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಶೀಘ್ರವೇ ನೀರು ಹರಿಸಲು ಮುಂದಾಗಬೇಕು ಎಂದು ಸಚಿವರು ಸೂಚಿಸಿದರು.


