ಬೆಂಗಳೂರು:ಕರ್ನಾಟಕದಲ್ಲಿ ಆಡಳಿತ ನಾಯಕತ್ವ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್‌ನಲ್ಲಿ ಭುಗಿಲೇಳುವ ಆಂತರಿಕ ಗೊಂದಲವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡದಿದ್ದರೆ, ಶಿವಕುಮಾರ್ ಬೆಂಬಲಿಗರು ಸಿಡಿದೇಳುವ ಸಾಧ್ಯತೆ ಇದೆ.
ಬಂಡಾಯ ಮಾಹಿತಿ
ಒಂದು ವೇಳೆ ಶಿವಕುಮಾರ್ ಅವರಿಗೆ ಅಧಿಕಾರ ನೀಡಿದರೆ, ಸಿದ್ದರಾಮಯ್ಯ ಬೆಂಬಲಿತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಂದಾಳತ್ವದಲ್ಲಿ ಬಂಡಾಯ ಏಳಬಹುದೆಂಬ ಮಾಹಿತಿ ದೆಹಲಿ ಬಿಜೆಪಿ ಅಂಗಳಕ್ಕೆ ತಲುಪಿದೆ.
ವರ್ಷಾಂತ್ಯದ ವೇಳೆಗೆ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಲಿದ್ದು, ಕಾಂಗ್ರೆಸ್‌ನ ಆಂತರಿಕ ಜಗಳದ ರಾಜಕೀಯ ಲಾಭ ಪಡೆಯಲು ಬಿಜೆಪಿ ನಾಲ್ವರು ನುರಿತ ಕೇಂದ್ರ ಸಚಿವರ ಅನುಭವ ಬಳಕೆಗೆ ಮುಂದಾಗಿದೆ.
ಇಂತಹ ಸನ್ನಿವೇಶದಲ್ಲಿ ರಾಜ್ಯಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಗೊಂದಲ ಉದ್ಭವಿಸದಂತೆ ಕೇಂದ್ರದಲ್ಲಿ ಜೆಡಿಎಸ್ ಪ್ರತಿನಿಧಿಯಾಗಿರುವ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವೊಲಿಕೆ ಪ್ರಯತ್ನಗಳೂ ನಡೆದಿವೆ.
ಬಿಜೆಪಿ-ಆರ್‌ಎಸ್‌ಎಸ್ ಸಂದೇಶ
ನೂತನ ಮೈತ್ರಿ ಸರ್ಕಾರ ರಚನೆ ವೇಳೆ ನಡೆಯಬಹುದಾದ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಕುಮಾರಸ್ವಾಮಿ ತಟಸ್ಥವಾಗಿ ಉಳಿಯುವಂತೆ ಪ್ರಮುಖರೊಬ್ಬರ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂದೇಶ ರವಾನಿಸಿದೆ.
ಕಳೆದ 10-12 ದಿನಗಳ ಹಿಂದೆ ಕುಮಾರಸ್ವಾಮಿ ಮತ್ತು ಆರ್‌ಎಸ್‌ಎಸ್‌ಗೆ ನಿಕಟವಾಗಿರುವ ಹಿರಿಯರೊಬ್ಬರು ಈ ಸಂಬಂಧ ಚರ್ಚಿಸಿದ್ದಾರೆ.
ಕುಮಾರಸ್ವಾಮಿ ಅವರನ್ನು ತಾವಿರುವ ಸ್ಥಳಕ್ಕೆ ಕರೆಸಿಕೊಂಡ ಹಿರಿಯರು, ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯದೆ ಮುಂದುವರೆದರೆ, ಶಿವಕುಮಾರ್ ಬಂಡೇಳುವ ಸಾಧ್ಯತೆ ಇದೆ.
ರಾಜಕೀಯ ತೀರ್ಮಾನಕ್ಕೆ ಸಿದ್ಧ
ಅವರು ಮುಖ್ಯಮಂತ್ರಿ ಆಗಲೇಬೇಕೆಂದು ಹಠ ತೊಟ್ಟಿದ್ದು, ಯಾವುದೇ ರಾಜಕೀಯ ತೀರ್ಮಾನಕ್ಕೂ ಸಿದ್ಧರಿದ್ದಾರೆ.
ಅಂತಹ ಸನ್ನಿವೇಶದಲ್ಲಿ ಒಂದು ಭಾಗವಾಗಿ ಸರ್ಕಾರದಿಂದ ಹೊರಬಂದರೆ, ಮಹಾರಾಷ್ಟ್ರ ಮಾದರಿಯಲ್ಲಿ ಆ ಗುಂಪಿನ ಜೊತೆ ಬಿಜೆಪಿ ಕೈಜೋಡಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಮೈತ್ರಿ ಸರ್ಕಾರ ರಚನೆಯಾದರೆ ಶಿವಕುಮಾರ್ ನಾಯಕತ್ವಕ್ಕೆ ರಾಜಕೀಯ ವಿರೋಧ ಮಾಡುವುದು ಬೇಡ.
ಮಧ್ಯಪ್ರವೇಶ ಬೇಡ
ಮುಂಬರುವ 2028ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆವರೆಗೂ ಕೇಂದ್ರದಲ್ಲಿ ಸಚಿವರಾಗಿದ್ದುಕೊಂಡು ಕಾರ್ಯನಿರ್ವಹಿಸಿ, ರಾಜ್ಯ ರಾಜಕಾರಣದಲ್ಲಿ ಮಧ್ಯಪ್ರವೇಶ ಬೇಡ ಎಂದಿದ್ದಾರೆ.
2028ರಲ್ಲಿ ನಿಮಗೆ ಒಳ್ಳೆಯ ದಿನಗಳು ಬರುವ ಸಾಧ್ಯತೆ ಇದ್ದು, ರಾಜ್ಯದಲ್ಲಿನ ಜನವಿರೋಧಿ ಸರ್ಕಾರ ತೆಗೆಯುವಲ್ಲಿ ತಾಳ್ಮೆ ಕಳೆದುಕೊಳ್ಳದೆ ಸಹಕರಿಸಿ ಎಂಬ ಸಂದೇಶವನ್ನು ಆರ್‌ಎಸ್‌ಎಸ್ ರವಾನಿಸಿದೆ.
ಹಿರಿಯರ ಮಾತು ಆಲಿಸಿದ ಕುಮಾರಸ್ವಾಮಿ, ಬಿಜೆಪಿ, ಆರ್‌ಎಸ್‌ಎಸ್ ಸಲಹೆ ಗೌರವಿಸುತ್ತೇನೆ, ನೀವು ಹೇಳಿದಂತೆ ನಡೆದುಕೊಳ್ಳುವೆ, ಆದರೆ, ಶಿವಕುಮಾರ್ ವಿಚಾರದಲ್ಲಿ ವೈಯಕ್ತಿಕ ರಾಜಕಾರಣ ಮುಂದುವರೆಯುತ್ತದೆ, ಮೈತ್ರಿ ಸರ್ಕಾರಕ್ಕೆ ನನ್ನಿಂದ ತೊಂದರೆ ಉಂಟಾಗದು ಎಂಬ ಮಾತು ನೀಡಿದ್ದಾರೆ.

