ಬೆಂಗಳೂರು:ಐಪಿಎಲ್ 2025ನೇ ಸಾಲಿನ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭದ್ರತೆ ದೃಷ್ಟಿಯಿಂದ ಈ ಮೊದಲು ನಿಗದಿಯಾಗಿದ್ದ ರೋಡ್ ಶೋ ಅನ್ನು ಸರ್ಕಾರ ಕಡೆ ಗಳಿಗೆಯಲ್ಲಿ ರದ್ದುಪಡಿಸಿತು.
ಕೇಂದ್ರ ಹಾಗೂ ರಾಜ್ಯದ ಗುಪ್ತಚರ ವಿಭಾಗಗಳ ಸಲಹೆ ಮೇರೆಗೆ ಗೃಹ ಇಲಾಖೆ ರೋಡ್ ಶೋ ರದ್ದುಪಡಿಸುವ ನಿರ್ಧಾರ ಕೈಗೊಂಡಿತು.
ವಿಶೇಷ ವೇದಿಕೆ
ಗುಜರಾತ್‌ನ ಅಹಮದಾಬಾದ್‌ನಿಂದ ವಿಜೇತ ತಂಡ ವಿಶೇಷ ವಿಮಾನದಲ್ಲಿ ನಗರಕ್ಕೆ ಆಗಮಿಸಿ, ನೇರವಾಗಿ, ರಾಜ್ಯದ ಜನತೆ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾದ ನಂತರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಿದ್ದ ವಿಶೇಷ ವೇದಿಕೆಗೆ ಆಗಮಿಸಿದರು.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಟ್ರೋಫಿ ವಿಜೇತ ತಂಡಕ್ಕೆ ಸನ್ಮಾನ ನಂತರ ಅವರನ್ನು ತೆರೆದ ವಾಹನದಲ್ಲಿ ಶಕ್ತಿಸೌಧದಿಂದ ಕೆಎಸ್‌ಸಿಎ ಕ್ರೀಡಾಂಗಣಕ್ಕೆ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ಯಲು ಸರ್ಕಾರ ತೀರ್ಮಾನಿಸಿತ್ತು.
ಆರ್‌ಸಿಬಿ ತಂಡದ ರೋಡ್ ಶೋ ಹಾಗೂ ನಂತರ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮದ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ರಾಜ್ಯದ ವಿವಿಧ ಮೂಲೆಗಳಿಂದ ಅಲ್ಲದೆ, ನೆರೆ ರಾಜ್ಯಗಳಿಂದಲೂ ಹರ್ಷೋದ್ಗಾರಗಳೊಂದಿಗೆ ರಾಜಧಾನಿಗೆ ಆಗಮಿಸಿದರು.
ಗುಪ್ತಚರ ಮಾಹಿತಿ
ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳಿಂದ ಎದುರಾಗಬಹುದಾದ ತೊಂದರೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡುತ್ತಿದ್ದಂತೆ ರೋಡ್ ಶೋ ರದ್ದುಪಡಿಸಿದ್ದಲ್ಲದೆ, ತಂಡದ ಆಟಗಾರರಿಗೆ ಬಿಗಿಭದ್ರತೆ ಒದಗಿಸಲಾಯಿತು.
ಆಟಗಾರರು ಉಳಿದುಕೊಂಡಿದ್ದ ರೇಸ್‌ಕೋರ್ಸ್ ರಸ್ತೆಯ ಪಂಚತಾರಾ ಹೋಟೆಲ್‌ಗೂ ಬಿಗಿ ಭದ್ರತಾ ಕೋಟೆ ರಚಿಸಲಾಗಿತ್ತು.
ಸರ್ಕಾರದ ಸನ್ಮಾನದ ನಂತರ ಆಟಗಾರರ ತಂಡ ವಿಶೇಷ ಬಸ್‌ನಲ್ಲಿ ನೇರವಾಗಿ ಕೆಎಸ್‌ಸಿಎ ಕ್ರೀಡಾಂಗಣಕ್ಕೆ ತೆರಳಿ ಅಭಿಮಾನಿಗಳ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿತು.
ಕನ್ನಡ ಬಾವುಟ
ಇದಕ್ಕೂ ಮುನ್ನ ವಿಮಾನ ನಿದ್ದಾಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್‌ಸಿಬಿ ತಂಡದ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಕನ್ನಡದ ಬಾವುಟ ನೀಡಿ ಸ್ವಾಗತಿಸಿದರು.
ಬಿಗಿ ಭದ್ರತೆಯಲ್ಲಿ ಎರಡು ವಿಶೇಷ ಬಸ್‌ಗಳಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ತಾಜ್ ವೆಸ್ಟ್‌ಎಂಡ್ ಹೋಟೆಲ್ ಹಾಗೂ ಅಲ್ಲಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಸಿದ್ಧಪಡಿಸಿದ್ದ ವೇದಿಕೆಗೆ ಬರುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳ ಸಾಗರ ವಿಜೇತ ತಂಡವನ್ನು ಭವ್ಯವಾಗಿ ಸ್ವಾಗತಿಸಿತು, ರಸ್ತೆಯುದ್ದಕ್ಕೂ ’ಜೈ ಆರ್‌ಸಿಬಿ’ ಎಂಬ ಉದ್ಘೋಷ ಮುಗಿಲುಮುಟ್ಟಿತ್ತು.

