ಬೆಂಗಳೂರು:ಒಂದು ಸಮುದಾಯ ಓಲೈಸಲು ಉಳಿದ ಸಮುದಾಯಗಳನ್ನು ಎದುರು ಹಾಕಿಕೊಳ್ಳುವಂತಹ ಹಿಂದುಳಿದ ವರ್ಗಗಳ ಆಯೋಗದ ವರದಿ ನಮಗೆ ಬೇಕಿಲ್ಲ ಎಂದು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆದೇಶ ಮಾಡಿದ ನಂತರವೇ ಸರ್ಕಾರ ಜಾತಿಗಣತಿ ಮರು ಸಮೀಕ್ಷೆಗೆ ಮುಂದಾಯಿತು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಕುರಿತು ಕಾಂತರಾಜ್ ಆಯೋಗದ ವರದಿ ಅನುಷ್ಟಾನಕ್ಕೆ ಮುಖ್ಯಮಂತ್ರಿ ಗಟ್ಟಿ ನಿಲುವು ತಳೆದಿದ್ದರು.
ವರದಿಗೆ ಬಹುಪಾಲು ಆಕ್ಷೇಪ
ಒಕ್ಕಲಿಗ, ವೀರಶೈವ/ಲಿಂಗಾಯತ ಸಮುದಾಯ ಹಾಗೂ ಕೆಲವು ಹಿಂದುಳಿದ ವರ್ಗಗಳಲ್ಲದೆ, ಪಕ್ಷದ ಮುಖಂಡರು, ಶಾಸಕರು, ಸಚಿವರು ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ, ಇದ್ಯಾವುದನ್ನೂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಈ ಸಮುದಾಯಗಳಿಗೆ ಸೇರಿದ ಸಚಿವರುಗಳು ವರಿಷ್ಠರೊಂದಿಗಿನ ಆತ್ಮೀಯತೆ ಬಳಸಿಕೊಂಡು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಗಮನಕ್ಕೆ ತಂದರು.
ಸರ್ಕಾರ ಎರಡು ವರ್ಷ ಆಡಳಿತ ಪೂರೈಸಿದ ಸಂದರ್ಭ ಬಳ್ಳಾರಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರಿಗೆ ಶಿವಕುಮಾರ್ ಜಾತಿಗಣತಿಯಲ್ಲಿನ ಗೊಂದಲಗಳ ಬಗ್ಗೆ ಮನವರಿಕೆ ಮಾಡಿದ್ದರು.
ವರದಿ ಜಾರಿ ಮಾಡಬೇಡಿ
ವೇದಿಕೆಯಲ್ಲೇ ಮುಖ್ಯಮಂತ್ರಿ ಅವರಿಗೆ, ನಾವು ತೀರ್ಮಾನ ಕೈಗೊಳ್ಳುವವರೆಗೂ ವರದಿ ಜಾರಿ ಮಾಡಬೇಡಿ ಎಂದು ರಾಹುಲ್ ಕಿವಿಮಾತು ಹೇಳಿದ್ದರು.
ಆದರೂ, ಸಿದ್ದರಾಮಯ್ಯ, ಇದಾದ 10 ದಿನಗಳ ನಂತರ ನಡೆದ ಸಂಪುಟ ಸಭೆಯಲ್ಲಿ ಆಯ್ದ ಕೆಲವೇ ಸಚಿವರ ಉಪಸ್ಥಿತಿ ವೇಳೆ, ಏನೇ ಆಗಲಿ, ಕಾಂತರಾಜ್ ವರದಿಯನ್ನು ಜಾರಿಗೆ ತಂದು ಬಿಡೋಣ ಎಂದಿದ್ದರು.
ಮುಖ್ಯಮಂತ್ರಿ ಆಪ್ತ ಬಣದಲ್ಲಿದ್ದ ಮುಂದುವರೆದ ಸಮುದಾಯದ ಸಚಿವರೊಬ್ಬರು, ಜಾತಿಗಣತಿ ವರದಿ ಅನುಷ್ಟಾನಕ್ಕೆ ಸಿದ್ದರಾಮಯ್ಯ ಕೈಗೊಂಡಿರುವ ತೀರ್ಮಾನವನ್ನು ರಹಸ್ಯವಾಗಿ ಇತರ ಸಚಿವರುಗಳಿಗೆ ರವಾನಿಸಿದರು.
ವರಿಷ್ಠರ ಗಮನಕ್ಕೆ
ಈ ಬೆಳವಣಿಗೆ ನಂತರ ಶಿವಕುಮಾರ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಕೃಷ್ಣಬೈರೇಗೌಡ ಸೇರಿದಂತೆ ಕೆಲವು ಸಚಿವರು ಪ್ರತ್ಯೇಕವಾಗಿ ವರಿಷ್ಠರ ಗಮನಕ್ಕೆ ತಂದರು.
ತಾವು ಸೂಚನೆ ನೀಡಿದ ನಂತರವೂ ಸಿದ್ದರಾಮಯ್ಯ, ವರದಿ ಅನುಷ್ಟಾನಕ್ಕೆ ಮುಂದಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಯಿತು.
ತಕ್ಷಣವೇ ಪಕ್ಷದ ಅಧ್ಯಕ್ಷರನ್ನು ಸಂಪರ್ಕಿಸಿ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ದೆಹಲಿಗೆ ಕರೆದು ತುರ್ತು ಸಭೆ ನಡೆಸುವಂತೆ ಸಲಹೆ ಮಾಡಿದರು.
ಹೈಕಮಾಂಡ್ ನಿರ್ಧಾರ
ವಿಶೇಷ ಸಂಪುಟ ಸಭೆಗೂ ಮುನ್ನ ಅಂದರೆ, ಜೂನ್ 10 ರಂದು ನಡೆದ ವರಿಷ್ಠರ ಸಭೆಗೆ ತೆರಳುವವರೆಗೂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಿರ್ಧಾರದ ಅರಿವಿರಲಿಲ್ಲ.
ಕಾಲ್ತುಳಿತ ಪ್ರಕರಣದ ಮಾಹಿತಿ ಪಡೆಯಲು ಕರೆಸಲಾಗಿದೆ ಎಂಬುದಾಗಿ ಭಾವಿಸಿ, ಅದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಂಡು ಮುಖ್ಯಮಂತ್ರಿ ದೆಹಲಿಗೆ ತೆರಳಿದ್ದರು.
ಉಪಮುಖ್ಯಮಂತ್ರಿ ಅವರಿಗೆ ವರಿಷ್ಠರು ಕೈಗೊಳ್ಳಲಿರುವ ತೀರ್ಮಾನಗಳ ಅರಿವಿದ್ದರೂ ತಮಗೆ ಏನೂ ತಿಳಿಯದವರಂತೆ ಇದ್ದರು.
ಸಂಪುಟ ಸಭೆ ಔಚಿತ್ಯ ಏನು
ಇಂದಿರಾ ಭವನದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ರಾಹುಲ್ ನೇರವಾಗಿ ಜಾತಿಗಣತಿ ವಿಷಯ ಪ್ರಸ್ತಾಪಿಸಿ, ನಾವು ಹೇಳುವವರೆಗೂ ವಿಷಯ ಮುಂದುವರೆಸಬೇಡಿ ಎಂದರೂ ವಿಶೇಷ ಸಂಪುಟ ಸಭೆ ಕರೆದಿದ್ದ ಔಚಿತ್ಯ ಏನು ಎಂದು ಪ್ರಶ್ನಿಸಿದರು.
ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಉಳಿದ ಸಮುದಾಯ ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ, ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಈಗಾಗಲೇ ಬಹುತೇಕ ಎಲ್ಲಾ ಸಮುದಾಯಗಳ ಶೇಕಡ 20ರಿಂದ 30ರಷ್ಟು ಮಂದಿ ನಮ್ಮಿಂದ ದೂರ ಸರಿದಿದ್ದಾರೆ.
ಇನ್ನು ಹಿಂದುಳಿದ ವರ್ಗಗಳಲ್ಲಿ ಶೇಕಡ 70ರಿಂದ 80ರಷ್ಟು ನಮ್ಮ ಜೊತೆಗಿದ್ದಾರೆ, ನೀವು ಕಾಂತರಾಜ್ ವರದಿ ಜಾರಿಗೆ ತಂದರೆ, ಇವರಲ್ಲಿ ಬಹುಪಾಲು ಮಂದಿ ಪಕ್ಷದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಮಾಹಿತಿ ಮುಂದಿಟ್ಟರು.
ಉಳಿದವರನ್ನು ಹಿಡಿದಿಟ್ಟುಕೊಳ್ಳಬೇಕಿದೆ
ಈ ಸಂದರ್ಭದಲ್ಲಿ ಸಿದ್ದರಾಮಯ್ಯ, ಈಗಾಗಲೇ ಒಕ್ಕಲಿಗ ಮತ್ತು ವೀರಶೈವ ಸಮುದಾಯದ ಬಹುತೇಕ ಮಂದಿ ದೂರ ಸರಿದಿದ್ದು, ಉಳಿದವರನ್ನು ನಾವು ಹಿಡಿದಿಟ್ಟುಕೊಳ್ಳಬೇಕಿದೆ ಎಂಬ ವಾದ ಮುಂದಿಟ್ಟರು.
ಇದಕ್ಕೆ ರಾಹುಲ್ ಕರ್ನಾಟಕದ ಮಟ್ಟಿಗೆ ಈ ಎರಡು ಪ್ರಮುಖ ಸಮುದಾಯಗಳನ್ನು ದೂರವಿಟ್ಟು ನಾವು ಪಕ್ಷ ಸಂಘಟನೆಯಾಗಲಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಲಿ ಸಾಧ್ಯವಿಲ್ಲ.
ಕಾಂಗ್ರೆಸ್‌ಗೂ ಈ ಸಮುದಾಯಗಳ ಬೆಂಬಲವಿದೆ, ಕಾಂತರಾಜ್ ವರದಿ ಜಾರಿಗೆ ತಂದರೆ, ಹಿಂದುಳಿದ ವರ್ಗದ ಇತರೆ ಜಾತಿಗಳಿಗೆ ಧಕ್ಕಬೇಕಾದ ಅವಕಾಶಗಳು ಕುರುಬ ಸಮುದಾಯದ ಪಾಲಾಗುತ್ತವೆ ಎಂಬ ವಾದವಿದೆ ಎಂದರು.
ದಲಿತರಿಗೂ ಅನ್ಯಾಯ
ಸಭೆಯ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆ, ವರದಿ ಜಾರಿಯಿಂದ ದಲಿತ ಸಮುದಾಯಗಳಿಗೂ ಅನ್ಯಾಯವಾಗಲಿದೆ ಎಂದು ತಮ್ಮಲ್ಲಿನ ಅಂಕಿ-ಅಂಶಗಳನ್ನೂ ಮುಂದಿಟ್ಟರು.
ತಕ್ಷಣವೇ ವೇಣುಗೋಪಾಲ್ ಹಾಗೂ ಸುರ್ಜೇವಾಲ ಸಹಾ ವರದಿ ಅನುಷ್ಟಾನ ವಿರೋಧಿಸಿದ್ದಲ್ಲದೆ, ಜಾರಿಯಿಂದ ಪಕ್ಷಕ್ಕೆ ಯಾವ ರೀತಿ ಹಿನ್ನಡೆ ಆಗಲಿದೆ ಎಂಬುದನ್ನು ಸಭೆ ಮುಂದೆ ಬಿಡಿಸಿಟ್ಟರು.
ಖಡಕ್ ಆದೇಶ
ಹತ್ತು ವರ್ಷಗಳ ಹಿಂದಿನ ವರದಿ ಜಾರಿ ಸಾಧ್ಯವಿಲ್ಲ, ಇದನ್ನು ಕೈಬಿಟ್ಟು ಹೊಸದಾಗಿ ಸಮೀಕ್ಷೆ ನಡೆಸಿ ಎಂದು ಖರ್ಗೆ ಖಡಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರುಗಳಿಗೆ ಆದೇಶ ಮಾಡಿದರು.
ಖರ್ಗೆ ಆದೇಶಕ್ಕೆ ರಾಹುಲ್ ಧ್ವನಿಗೂಡಿಸುತ್ತಿದ್ದಂತೆ ಮುಖ್ಯಮಂತ್ರಿ ಅವರು, ಕಾಂತರಾಜ್ ವರದಿಯನ್ನು ಗಂಟುಮೂಟೆ ಕಟ್ಟುವ ತೀರ್ಮಾನಕ್ಕೆ ಬಂದರು.

