ಬೆಂಗಳೂರು:ಸಾಮಾಜಿಕ, ಆರ್ಥಿಕ, ಶೈಕ್ಷಣಿಕ (ಜಾತಿಗಣತಿ) ಮರುಸಮೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ರಾಜ್ಯ ಒಕ್ಕಲಿಗರ ಸಂಘ ಇಂದಿಲ್ಲಿ ಸ್ವಾಗತಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆದೇಶದಂತೆ ಒಕ್ಕಲಿಗರ ಸಂಘ ಪ್ರತ್ಯೇಕವಾಗಿ ಸಮುದಾಯದ ಡಿಜಿಟಲ್ ಸರ್ವೆ ಮಾಡಿಸಲಿದೆ.
ಜನಾಂಗದ ಪ್ರತ್ಯೇಕ ಸಮೀಕ್ಷೆ
ಇದು ಯಾವುದೇ ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧವಿಲ್ಲ, ಜನಾಂಗದ ಹಿತದೃಷ್ಟಿಯಿಂದ ಸಮೀಕ್ಷೆ ಮಾಡಿಸುತ್ತೇವೆ ಎಂದರು.
ಸರ್ಕಾರ ಮಾಡುವ ಜಾತಿಗಣತಿಯಲ್ಲಿ ಮತ್ತೆ ತಪ್ಪುಗಳಾದರೆ ಹೋರಾಟ ಮಾಡುತ್ತೇವೆ, ಆಯಾ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗಲು ವೈಜ್ಞಾನಿಕ ರೀತಿಯಲ್ಲಿ ಗಣತಿ ಆಗಬೇಕು, ವೈಜ್ಞಾನಿಕ ಸಮೀಕ್ಷಾ ವರದಿ ಬಂದರೆ, ನಮ್ಮ ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಒಪ್ಪುತ್ತೇವೆ ಎಂದರು.
ಕಾಂತರಾಜು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ವೈಜ್ಞಾನಿಕವಾಗಿಲ್ಲ, 10 ವರ್ಷದಷ್ಟು ಹಳೆಯದು, ಹೊಸ ಸಮೀಕ್ಷೆ ಮಾಡಬೇಕೆಂಬ ಒತ್ತಾಯಪೂರ್ವಕ ಮನವಿ ಮಾಡಿದ್ದೆವು, ಇದಕ್ಕೆ ಸರ್ಕಾರ ಸ್ಪಂದಿಸಿದೆ.
ಸ್ವಯಂ ಸೇವಕರ ನೇಮಕ
ಡಿಜಿಟಲ್, ಆನ್‌ಲೈನ್ ತಂತ್ರಜ್ಞಾನ ಬಳಸಿ ಹಳ್ಳಿ, ಪಟ್ಟಣಗಳಲ್ಲಿ ಸಮೀಕ್ಷೆ ನಡೆಸಲಾಗುವುದು, ಸಂಘವೇ ಇದಕ್ಕಾಗಿ ಸ್ವಯಂ ಸೇವಕರ ನೇಮಕ ಮಾಡಲಿದೆ.
ಕೇಂದ್ರ ಸರ್ಕಾರ ಜನಗಣತಿ ಜೊತೆಯಲ್ಲೇ ಜಾತಿಗಣತಿ ಮಾಡುವುದಾಗಿ ಘೋಷಿಸಿದೆ, ಆದರೂ, ರಾಜ್ಯ ಸರ್ಕಾರ ಹೊಸದಾಗಿ ಸಮೀಕ್ಷೆ ಮಾಡುವುದಾಗಿ ಪ್ರಕಟಿಸಿದೆ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಜಾತಿಗಣತಿ ಮಾಡಿಸಿದರೆ ನ್ಯಾಯಸಮ್ಮತವಾಗಿರಲಿದೆ.
ಮರು ಸಮೀಕ್ಷೆಗೆ ಮೂರು ತಿಂಗಳ ಸಮಯಾವಕಾಶ ಸಾಲುವುದಿಲ್ಲ, ಇನ್ನೂ ಎರಡು ತಿಂಗಳು ಹೆಚ್ಚು ನೀಡಿದರೆ ಅನುಕೂಲವಾಗಲಿದೆ.
ವೀರಶೈವ, ಒಕ್ಕಲಿಗ, ಬ್ರಾಹಣರ ವಿರೋಧ
ವೀರಶೈವ, ಒಕ್ಕಲಿಗ, ಬ್ರಾಹಣರು ಈಗಿರುವ ವರದಿಗೆ ವಿರೋಧ ವ್ಯಕ್ತಪಡಿಸಿ ಅನುಷ್ಠಾನ ಮಾಡಬಾರದು ಎಂದು ಆಗ್ರಹಿಸಿದ್ದವು.
ಸಮೀಕ್ಷೆ ಆಧಾರ್ ಲಿಂಕ್‌ನೊಂದಿಗೆ ಮಾಡಬೇಕು, ಜಿಯೋ ಟ್ಯಾಗ್ ಮಾಡಿದರೆ ಕುಟುಂಬದ ಆರ್ಥಿಕತೆ ಮಾಹಿತಿಯೂ ಪಡೆಯಬಹುದು, ಗ್ರಾಮ ಲೆಕ್ಕಿಗರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಪಾಲ್ಗೊಳ್ಳುವಂತೆ ಮಾಡಬೇಕು, ಕರಾರುವಾಕ್ಕು ಜಾತಿಗಣತಿ ಮಾಡಿದರೆ ಯಾರಿಗೂ ಅನ್ಯಾಯವಾಗುವುದಿಲ್ಲ.
ಮರುಸಮೀಕ್ಷೆ ವರದಿಗೆ ಆಕ್ಷೇಪಣೆ ಸಲ್ಲಿಕೆಗೂ ಅವಕಾಶ ಇರಬೇಕು, ಎಲ್ಲಾ ಸಮುದಾಯಗಳಿಗೂ ನ್ಯಾಯ ದೊರಕುವ ರೀತಿ ಇರಬೇಕು, ಜಾತಿಗಣತಿ ಸಂದರ್ಭದಲ್ಲಿ ವೀರಶೈವ, ಲಿಂಗಾಯತ, ಒಕ್ಕಲಿಗ ಸಮುದಾಯವನ್ನು ಉಪಜಾತಿಗಳ ಹೆಸರಿನಲ್ಲಿ ನಮೂದಿಸದೆ ಒಟ್ಟಾರೆಯಾಗಿ ವೀರಶೈವ, ಲಿಂಗಾಯತ, ಒಕ್ಕಲಿಗ ಎಂಬುದಾಗಿ ಮಾತ್ರ ನಮೂದಿಸಬೇಕು ಎಂದು ಒತ್ತಾಯಿಸಿದರು.

