ದಾವಣಗೆರೆ:ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿಗಣತಿ ನಡೆಸುವ ಸಂಬಂಧ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
ನಮ್ಮ ಸಮೀಕ್ಷೆಗೆ ಸಂಬಂಧವಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಡೆಸಲಿರುವ ಜಾತಿಗಣತಿಗೂ ನಮ್ಮ ಸಮೀಕ್ಷೆಗೂ ಸಂಬಂಧವಿಲ್ಲ ಎಂದಿದ್ದಾರೆ.
ನಾವು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುತ್ತಿದ್ದೇವೆ, ಜೊತೆಗೆ ಜಾತಿಗಣತಿಯೂ ನಡೆಯುತ್ತದೆ, ಕೇಂದ್ರ ಇಂತಹ ಸಮೀಕ್ಷೆ ಮಾಡುತ್ತಿಲ್ಲ, ಅವರು ಜಾತಿಗಣತಿಯನ್ನಷ್ಟೇ ಮಾಡುತ್ತಿದ್ದಾರೆ.
ಪ್ರಬಲರು-ದುರ್ಬಲರ ಆಕ್ಷೇಪ
ಕಾಂತರಾಜ್ ವರದಿ ಶಿಫಾರಸು ಬಗ್ಗೆ ಪ್ರಬಲರು ಮತ್ತು ದುರ್ಬಲರು ಆಕ್ಷೇಪ ವ್ಯಕ್ತಪಡಿಸಿದ್ದರು, ಅಲ್ಲದೆ, ಸಮೀಕ್ಷೆ ನಡೆಸಿ 10 ವರ್ಷ ಕಳೆದಿರುವುದರಿಂದ, ನಿಯಮದಂತೆ ಹೊಸದಾಗಿ ಸಮೀಕ್ಷೆ ನಡೆಸುತ್ತಿದ್ದೇವೆ ಎಂದರು.
ಸಾಮಾಜಿಕ ನ್ಯಾಯ ಒದಗಿಸಲು ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ತಿಳಿದಿರಬೇಕು, ಅದಕ್ಕಾಗಿ ಮರು ಸಮೀಕ್ಷೆ ಅಗತ್ಯವಿದೆ, ಕೇಂದ್ರ ಸರ್ಕಾರ ಜಾತಿಗಣತಿ ನಡೆಸುತ್ತಿದೆಯೇ ಹೊರತು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುತ್ತಿಲ್ಲ.
14 ವರ್ಷಗಳ ಹಿಂದೆ ಜನಗಣತಿ
ಕಳೆದ 14 ವರ್ಷಗಳ ಹಿಂದೆ ಜನಗಣತಿ ನಡೆದಿತ್ತು, ಕೇಂದ್ರ ಸರ್ಕಾರ ಜನಗಣತಿ 2027ರಿಂದ ಸಮೀಕ್ಷೆ ನಡೆಸುತ್ತಿದೆ, ಇದರಲ್ಲಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುವುದಾಗಿ ಹೇಳಿಲ್ಲ, ನಾವು ಮಾಡುತ್ತಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಜೊತೆ ಜಾತಿಗಣತಿ ಎಂದರು.
ಕೇಂದ್ರದ ಜನಗಣತಿಗೆ ನಮ್ಮ ತಕರಾರಿಲ್ಲ, ಆದರೆ, ನಮ್ಮ ಸಮೀಕ್ಷೆ ಹಾಗೂ ಕೇಂದ್ರದ ಸಮೀಕ್ಷೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಷಯಗಳ ವ್ಯತ್ಯಾಸವಿದೆ ಎಂದರು.

