ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ್ದ ಎಸ್‌ಐಟಿ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯ ಕೇತಗಾನಹಳ್ಳಿ ಬಳಿ ಕುಮಾರಸ್ವಾಮಿ ಮತ್ತು ಇತರರು 14 ಎಕರೆಗೂ ಹೆಚ್ಚು ಭೂಮಿ ಒತ್ತುವರಿ ಮಾಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇದೇ ಮೊದಲ ಬಾರಿಗೆ ಭೂವಿವಾದಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿತ್ತು.
ತನಿಖೆಗೆ ಮಧ್ಯಂತರ ತಡೆ
ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದರು, ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಇ.ಎಸ್. ಇಂದರೇಶ್, ಎಸ್‌ಐಟಿ ತನಿಖೆಗೆ ಮಧ್ಯಂತರ ತಡೆ ನೀಡಿದರು.
ಕುಮಾರಸ್ವಾಮಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಉದಯ್ ಹೊಳ್ಳ ಮತ್ತು ಎ.ವಿ.ನಿಶಾಂತ್, ಅಧಿಸೂಚನೆ ಹೊರಡಿಸದೆ ಸರ್ಕಾರ ಎಸ್‌ಐಟಿ ರಚಿಸಲಾಗಿದೆ, ಇದು ಕಾನೂನುಬಾಹಿರವಾಗಿದ್ದು ಅನೂರ್ಜಿತಗೊಳಿಸುವಂತೆ ಮನವಿ ಮಾಡಿದರು.
ಹಿರಿಯ ಐಎಎಸ್ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ, ಭೂ ಕಂದಾಯ ಕಾಯಿದೆ 64 ಹಾಗೂ ಭೂಕಬಳಿಕೆ ನಿಷೇಧ ಕಾಯಿದೆ 2011ರ ಅಡಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಅಧಿಸೂಚನೆ ಹೊರಡಿಸಿರಲಿಲ್ಲ.
ತಹಸೀಲ್ದಾರ್ ನೋಟಿಸ್
ಎಸ್‌ಐಟಿ ರಚನೆ ಆಗುತ್ತಿದ್ದಂತೆ ಸ್ಥಳೀಯ ತಹಸೀಲ್ದಾರ್, ಒತ್ತುವರಿ ಮಾಡಿರುವ ಆರು ಎಕರೆ ಸರ್ಕಾರಿ ಭೂಮಿ ತೆರೆವುಗೊಳಿಸುವಂತೆ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದರು.
ನೋಟಿಸ್ ನೀಡಿದ ಬೆನ್ನಲ್ಲೇ ಕಂದಾಯ ಹಾಗೂ ಭೂಮಾಪನ ಇಲಾಖೆ ಕುಮಾರಸ್ವಾಮಿ ಮತ್ತು ಇತರರು ಅನುಭವಿಸುತ್ತಿರುವ ಭೂಮಿಯ ಪೂರ್ಣ ಅಳತೆ ಮಾಡಿ, ಅವರೂ ಸೇರಿದಂತೆ ಇತರರು 14 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆಂದು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು.
ತೆರವಿಗೆ ಭೂಮಿ ಗುರುತು
ಇದರ ಆಧಾರದ ಮೇಲೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನೇತೃತ್ವದಲ್ಲಿ ಒತ್ತುವರಿ ತೆರವಿಗೆ ಭೂಮಿ ಅಳತೆ ಮಾಡಿ ಗುರುತು ಮಾಡಲಾಗಿತ್ತು.
ಈ ಎಲ್ಲಾ ಬೆಳವಣಿಗೆ ನಂತರ ನ್ಯಾಯಾಲಯದ ಮೊರೆ ಹೋಗಿದ್ದ ಕುಮಾರಸ್ವಾಮಿ ಪರವಾಗಿ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯಗಳಲ್ಲಿ ಎರಡು-ಮೂರು ಬಾರಿ ಆದೇಶ ನೀಡಲಾಗಿತ್ತು.

