ಬೆಂಗಳೂರು:ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಏನು ನಡೆಯುತ್ತಿದೆಯೋ ನನಗೆ ಗೊತ್ತಿಲ್ಲ, ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗಲಿದೆ ಎಂಬುದಾಗಿ ಮುಖ್ಯಮಂತ್ರಿಗಳ ಆಪ್ತ ಸಚಿವರೇ ಹೇಳಿರುವುದು ಗಮನಿಸಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎನ್.ರಾಜಣ್ಣ ಸೆಪ್ಟೆಂಬರ್ ತಿಂಗಳಲ್ಲಿ ಬದಲಾವಣೆ ಆಗುತ್ತದೆ, ಕ್ರಾಂತಿ ನಡೆಯುತ್ತದೆ ಎಂದಿದ್ದಾರೆ, ಅದು ಕ್ರಾಂತಿಯೋ, ಏನೋ, ನನಗೆ ಗೊತ್ತಿಲ್ಲ, ಅದು ಏನೆಂಬುದನ್ನು ರಾಜಣ್ಣ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು, ಅವರ ಪಕ್ಷದ ಬೆಳವಣಿಗೆ ಬಗ್ಗೆ ನನಗೆ ಹೇಗೆ ಗೊತ್ತಾಗಲಿದೆ ಎಂದರು.
ಹುಲಿಗಳ ಸಾವು ಕಳವಳಕಾರಿ
ಮಲೆಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿನ ಘಟನೆಗೆ ಕಳವಳ ವ್ಯಕ್ತಪಡಿಸಿದ ಅವರು, ಇಂಥ ಧಾರುಣ ಘಟನೆ ನಡೆಯಬಾರದಿತ್ತು, ಇದು ರಾಜ್ಯಕ್ಕೆ ಕಪ್ಪುಚುಕ್ಕೆ, ಹುಲಿಗಳು ಯಾವ ಕಾರಣಕ್ಕೆ ಸತ್ತಿವೆ ಎಂಬ ಮಾಹಿತಿ ಇಲ್ಲ, ಈ ಬಗ್ಗೆ ವಿಸ್ತೃತ ತನಿಖೆ ನಡೆಸಿ, ಕಾರಣ ಏನೆಂಬ ಮಾಹಿತಿ ಹೊರಬರಬೇಕು ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇತ್ತೀಚೆಗೆ ದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿಯ ನನ್ನ ಮನೆಗೆ ಅಶೋಕ್ ಬಂದಿದ್ದರು, ನಾವು ಅವರು ಅಣ್ಣ-ತಮ್ಮಂದಿರು, ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ, ದೆಹಲಿಯ ಹೊಸ ಸರ್ಕಾರಿ ನಿವಾಸಕ್ಕೆ ಸ್ಥಳಾಂತರಗೊಂಡ ನಂತರ ಮೊದಲ ಬಾರಿಗೆ ಬಂದಿದ್ದರು, ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಘೋಷಣೆ ವಿಷಯ ನನಗೇನೂ ಗೊತ್ತಿಲ್ಲ ಎಂದರು.

ಕೆಂಪೇಗೌಡ ಮಹಾನ್ ಮಾನವತಾವಾದಿ
ರಾಜ್ಯದ ಜನರಿಗೆ ನಾಡಪ್ರಭು ಕೆಂಪೇಗೌಡ ಜಯಂತಿ ಶುಭ ಕೋರಿದ ಅವರು, ಬೆಂಗಳೂರು ನಿರ್ಮಾತೃ, ಅಪ್ರತಿಮ ಆಡಳಿತಗಾರ, ಅನನ್ಯ ದಾರ್ಶನಿಕ, ಶಾಂತಿಪ್ರಿಯ, ಸರ್ವಜನರ ಶ್ರೇಯಸ್ಸಿಗೆ ದುಡಿದ ಮಹಾನ್ ಮಾನವತಾವಾದಿ ಎಂದು ಸ್ಮರಿಸಿದರು.
ನಾಡಪ್ರಭು ಹಾಕಿಕೊಟ್ಟ ಅಭಿವೃದ್ಧಿ, ನೆಮ್ಮದಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಅವಿಷ್ಕಾರ, ಕೈಗಾರಿಕೆ, ಉದ್ಯೋಗಾವಕಾಶದ ದೂರದೃಷ್ಟಿಯ ಹಾದಿ ನಮಗೆಲ್ಲರಿಗೂ ಮಾದರಿ ಮತ್ತು ಪ್ರೇರಣೆಯಾಗಿದೆ, ಜಗತ್ತಿನ ಮುಂಚೂಣಿ ನಗರವಾಗಿರುವ ಬೆಂಗಳೂರಿನ ಭವ್ಯ ಪರಂಪರೆ ಮುಂದುವರಿಸೋಣ ಎಂದರು.

