ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಕರ್ನಾಟಕ ಅಸ್ಮಿತೆ ಬಿಂಬಿಸುವ ಹಾಗೂ ಜಿ.ಐ.ಟ್ಯಾಗ್‌ನ 28 ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಯ ಕಲಾ ಲೋಕವನ್ನು ಸೆಪ್ಟೆಂಬರ್‌ನಲ್ಲಿ ಉದ್ಘಾಟಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳೊಂದಿಗೆ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಲೋಕ ಮಳಿಗೆಯಲ್ಲಿ ಅಸ್ಮಿತೆ ಸಾರುವ ಕಾಫಿ, ಮೈಸೂರು ಸಿಲ್ಕ್ಸ್, ಕೆಎಸ್‌ಡಿಎಲ್, ಲಿಡ್ಕರ್ ಉತ್ಪನ್ನಗಳು, ಕರಕುಶಲ, ಕೈಮಗ್ಗ ವಸ್ತುಗಳು ಇರಲಿವೆ ಎಂದರು.
28 ಜಿ.ಐ. ಉತ್ಪನ್ನ
ಚನ್ನಪಟ್ಟಣದ ಬೊಂಬೆಯಂಥ 28 ಜಿ.ಐ. ಉತ್ಪನ್ನಗಳೂ ಇರಲಿವೆ, ಅಂತಾರಾಷ್ಟ್ರೀಯ ಮಟ್ಟದ ಪ್ಯಾಕಿಂಗ್ ವಿನ್ಯಾಸ ಮತ್ತು ಬ್ರ್ಯಾಂಡಿಂಗ್ ಮೂಲಕ ಪ್ರದರ್ಶನ ಮತ್ತು ಮಾರಾಟದೊಂದಿಗೆ ಜಾಗತಿಕ ಮಟ್ಟದ ಗ್ರಾಹಕರನ್ನು ಸೆಳೆಯುವುದು ಉದ್ದೇಶವಾಗಿದೆ.
ಮುಂದಿನ ದಿನಗಳಲ್ಲಿ ಇಂಟರ್ನ್ಯಾಷನಲ್ ಲಾಂಜ್‌ನಲ್ಲೂ ಕಲಾಲೋಕ ಮಳಿಗೆ ತೆರೆಯಲಾಗುವುದು, ಪ್ರಸ್ತುತ ಸಿದ್ಧವಾಗುತ್ತಿರುವ ಮೊದಲ ಮಳಿಗೆ 130 ಚದರ ಮೀಟರ್ ವಿಸ್ತೀರ್ಣವಿದೆ, ಆಗಸ್ಟ್ ಅಂತ್ಯಕ್ಕೆ ಕಾಮಗಾರಿಗಳು ಮುಗಿಯಲಿವೆ, ಕೆಂಪೇಗೌಡ ವಿಮಾನ ನಿಲ್ದಾಣ ನಿಗದಿತ ಬಾಡಿಗೆಯಲ್ಲಿ ಶೇಕಡ ೫೦ರಷ್ಟು ರಿಯಾಯಿತಿ ನೀಡಿದೆ ಎಂದರು.


