ನವದೆಹಲಿ:ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ದುಡ್ಡು ಮೊದಲು ಕೊಡಿಸಲಿ, ಖಾಲಿ ಮಾತುಗಳು ಬೇಡ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ ಕುರಿತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮೊದಲು ಹಣ ಕೊಡಿಸಲಿ, ಆಮೇಲೆ ಕ್ರೆಡಿಟ್ ತೆಗೆದುಕೊಳ್ಳಲಿ, ಅವರ ಸಲಹೆಯನ್ನೂ ನಾನು ಸ್ವೀಕಾರ ಮಾಡುತ್ತೇನೆ ಎಂದರು.
ಸಚಿವ ಸಂಪುಟ ಚರ್ಚೆ ಇಲ್ಲ
ಕರ್ನಾಟಕದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಬದಲಾವಣೆ ಚರ್ಚೆ ನಡೆದಿಲ್ಲ, ರಾಜ್ಯದ ಅಭಿವೃದ್ಧಿ, ಬೆಂಗಳೂರಿನಲ್ಲಿ ಕೆಲವು ರಸ್ತೆಗಳ ಅಗಲೀಕರಣಕ್ಕೆ ರಕ್ಷಣಾ ಇಲಾಖೆ ಒಡೆತನದಲ್ಲಿರುವ ಭೂಮಿ ಹಸ್ತಾಂತರ ಹಾಗೂ ದಸರಾ ವೇಳೆ ಚುಟುಕು ಏರ್‌ಶೋಗೆ ರಕ್ಷಣಾ ಸಚಿವರ ಅನುಮತಿಗೆ ದೆಹಲಿಗೆ ಬಂದಿದ್ದೇವೆ.
ವಿಧಾನಸಭಾ ಅಧಿವೇಶನಕ್ಕೆ ಮುನ್ನ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಆಗಲಿದೆ, ಮಾಧ್ಯಮ ಕ್ಷೇತ್ರ ಪ್ರತಿನಿಧಿಸಲೂ ಒಬ್ಬರಿಗೆ ಸ್ಥಾನ ನೀಡಲಾಗುವುದು ಎಂದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಯಾಗಿಲ್ಲ, ಇತರ ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿದ್ದು, ಸಮಯ ನೀಡದಿದ್ದರೆ ಯಾರನ್ನೂ ಭೇಟಿಯಾಗಲು ಆಗುವುದಿಲ್ಲ.
ಸಂಘಟನಾ ವರ್ಷ ಘೋಷಣೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸಕ್ತ ವರ್ಷವನ್ನು ಪಕ್ಷ ಸಂಘಟನಾ ವರ್ಷ ಎಂಬುದಾಗಿ ಘೋಷಿಸಿದ್ದಾರೆ, ಪಕ್ಷದ ಜಿಲ್ಲಾ ಅಧ್ಯಕ್ಷರ ಸಭೆಯನ್ನು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ಕೇವಲ ಸಂಘಟನೆ ವಿಚಾರ ಚರ್ಚಿಸಲಾಗುತ್ತಿದೆ, ಯಾವುದೇ ರಾಜಕೀಯ ಇಲ್ಲ ಎಂದರು.
ಬೀದರ್‌ನ ಸಣ್ಣ ನೀರಾವರಿ ಇಲಾಖೆ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಆತ್ಮಹತ್ಯೆ ವಿಚಾರ ಕುರಿತು ಮಾಹಿತಿ ತಿಳಿದು ಮಾತನಾಡುತ್ತೇನೆ.
ಬಿಹಾರದಲ್ಲಿ ರಾಹುಲ್ ಹೋರಾಟ
ಬಿಹಾರದಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ತಡೆಯುವ ಮೂಲಕ ವಿರೋಧ ಪಕ್ಷಗಳ ದನಿ ಅಡಗಿಸುವುದೇ ಕೇಂದ್ರ ಸರ್ಕಾರದ ಕೆಲಸ, ರಾಹುಲ್ ಮತದಾರರ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾಷಾ ಸಂಘರ್ಷ ಆಯಾ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರ, ಆ ಬಗ್ಗೆ ಮಾತನಾಡುವುದಿಲ್ಲ, ನಾವು ಕನ್ನಡ ಮತ್ತು ಇಂಗ್ಲಿಷ್‌ಗೆ ಪ್ರಾಮುಖ್ಯತೆ ನೀಡುತ್ತೇವೆ ಎಂದರು.
ಕನ್ನಡ ಪರೀಕ್ಷೆಯ ಅಂಕಗಳನ್ನು 125 ರಿಂದ 100ಕ್ಕೆ ಇಳಿಸಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ನನ್ನ ಇಲಾಖೆ ಕುರಿತಾದ ಪ್ರಶ್ನೆಗೆ ಮಾತ್ರ ಉತ್ತರ ಹೇಳಬಹುದು ಎಂದರು.
ಬೆಂಗಳೂರಿನಲ್ಲಿ ಶುಲ್ಕ ಇಲ್ಲದೇ ಟನಲ್ ರಸ್ತೆ ನಿರ್ವಹಣೆ ಸಾಧ್ಯವಿಲ್ಲ, ಏರ್‌ಪೋರ್ಟ್, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲಿ ಟೋಲ್ ಇದೆ, ಇಲ್ಲಿಗೇಕೆ ಬೇಡ ಎಂದರು.

