ಬೆಂಗಳೂರು:ಅನಧಿಕೃತ ಕೃಷಿ ಪಂಪ್ ಸೆಟ್‌ಗಳನ್ನು ಕುಸುಮ್-ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್‌ಸೆಟ್‌ಗೆ ಪರಿವರ್ತಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಇಂಧನ ಇಲಾಖೆ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 4.5 ಲಕ್ಷ ಅನಧಿಕೃತ ಸಂಪರ್ಕಗಳಿದ್ದು, ಅವುಗಳಲ್ಲಿ 2 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ.
ಎಲ್ಲಾ ಅಕ್ರಮ ಸಂಪರ್ಕ ಸಕ್ರಮ
ಸಕ್ರಮ ಗೊಂಡ ಈ ಪಂಪ್‌ಸೆಟ್‌ಗಳಿಗೂ ಸೋಲಾರ್ ವ್ಯವಸ್ಥೆ ಅಳವಡಿಸಲಾಗುವುದು, ಮುಂದಿನ ದಿನಗಳಲ್ಲಿ ಎಲ್ಲಾ ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಿ, ಈ ಯೋಜನೆಯಡಿಯೇ ತರಲಾಗುವುದು.
ಸೋಲಾರ್ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ಕೇಂದ್ರ ಸರ್ಕಾರ ಶೇಕಡ 30ರಷ್ಟು, ರಾಜ್ಯ ಸರ್ಕಾರ ಶೇಕಡ 50ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ಫಲಾನುಭವಿಗಳು ಶೇಕಡ 20ರಷ್ಟನ್ನು ಭರಿಸಬೇಕಿದೆ.
ಯೋಜನೆಯಡಿ 40,000 ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದ್ದು, ಇದಕ್ಕಾಗಿ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ.
25,000 ಹೊಸ ಅರ್ಜಿ
ಕುಸುಮ್-ಬಿ ಅಡಿ ಇನ್ನೂ 25,000 ರೈತರು ಹೊಸದಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೂ ಹಂತ ಹಂತವಾಗಿ ಸೋಲಾರ್ ಪರಿವರ್ತನೆಗೆ ಅವಕಾಶ ಮಾಡಿಕೊಡುತ್ತೇವೆ.
ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಕೆಯಿಂದ ಬೇಸಿಗೆಯಲ್ಲಿ ರೈತರು ವಿದ್ಯುತ್‌ಗಾಗಿ ಪರಿತಪಿಸುವುದು ತಪ್ಪುತ್ತದೆ.

ರೈತರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.
ಸೋಲಾರ್ ವಿದ್ಯುತ್‌ಗೆ ಒತ್ತು
ರಾಜ್ಯದಲ್ಲಿ ಬೇಡಿಕೆಗಿಂತ ವಿದ್ಯುತ್ ಉತ್ಪಾದನೆ ಹೆಚ್ಚಿದ್ದರೂ ನಾವು ಸೋಲಾರ್ ಮತ್ತು ಪವನ ವಿದ್ಯುತ್‌ಗೆ ಹೆಚ್ಚು ಒತ್ತು ಕೊಟ್ಟು, ಅದರಿಂದ ಹೆಚ್ಚು ಉತ್ಪಾದನೆಗೆ ಮುಂದಾಗಿದ್ದೇವೆ.
ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಬೇಡಿಕೆ ಹೆಚ್ಚಿದ್ದು, ನೀಗಿಸುವಂತೆ ಇಲಾಖೆಗೆ ಆದೇಶ ಮಾಡಿರುವುದಾಗಿಯೂ ಮುಖ್ಯಮಂತ್ರಿ ತಿಳಿಸಿದರು.
ನೀರಾವರಿ ಪಂಪ್‌ಸೆಟ್‌ಗಳಿಗೆ ಕಳೆದ ಸಾಲಿನಲ್ಲಿ 12,785 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು ಫೆಬ್ರವರಿವರೆಗೆ 11,720 ಕೋಟಿ ರೂ.ಬಿಡುಗಡೆ ಆಗಿದೆ, ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 16,201 ಕೋಟಿ ರೂ. ಹಂಚಿಕೆಯಾಗಿದೆ ಎಂದರು.


