ಬೆಂಗಳೂರು:ಆರ್‌ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮಾಜಿ ಪೋಲಿಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
ಪೋಲಿಸ್ ಅಧಿಕಾರಿಗಳಲ್ಲದೆ, ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಸಂಸ್ಥೆಗಳ ವಿರುದ್ಧವೂ ಎಫ್‌ಐಆರ್ ದಾಖಲಿಸುವ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಎಫ್‌ಐಆರ್ ಕುರಿತು ತೀರ್ಮಾನ
ದಯಾನಂದ್ ಅಲ್ಲದೆ, ಅಂದಿನ ಹೆಚ್ಚುವರಿ ಪೋಲಿಸ್ ಆಯುಕ್ತ ವಿಕಾಸ್‌ಕುಮಾರ್, ಕೇಂದ್ರೀಯ ಡಿಸಿಪಿ ಶೇಖರ್, ಕಬ್ಬನ್‌ಪಾರ್ಕ್ ಪೋಲಿಸ್ ಠಾಣೆ ಎಸಿಪಿ ಬಾಲಕೃಷ್ಣ ಹಾಗೂ ಪೋಲಿಸ್ ಇನ್ಸ್‌ಪೆಕ್ಟರ್ ಗಿರೀಶ್ ಈಗಾಗಲೇ ಅಮಾನತಿನಲ್ಲಿದ್ದು, ಇವರುಗಳ ವಿರುದ್ಧ ಎಫ್‌ಐಆರ್ ಕುರಿತು ತೀರ್ಮಾನವಾಗಲಿದೆ.
ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ.ಕುನ್ಹಾ, ಸಿಐಡಿ ಹಾಗೂ ಜಿಲ್ಲಾ ಮಾಜಿಸ್ಟ್ರೇಟ್ ಪ್ರತ್ಯೇಕ ವರದಿಗಳನ್ನು ಸಲ್ಲಿಸಿದ್ದಾರೆ.
ಈ ವರದಿಯನ್ನೇ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರನ್ನು ಒಳಗೊಂಂಡ ನ್ಯಾಯಪೀಠಕ್ಕೂ ಸಲ್ಲಿಸಲಾಗಿದೆ.
ಕುನ್ಹಾ ವರದಿ ಅಂಗೀಕಾರ
ನ್ಯಾಯಮೂರ್ತಿ ಕುನ್ಹಾ ನೀಡಿದ ವರದಿಯನ್ನು ಸರ್ಕಾರ ಅಂಗೀಕರಿಸಿರುವುದಲ್ಲದೆ, ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಯಿತಾದರೂ ವಿಸ್ತೃತ ಚರ್ಚೆ ನಡೆದಿರಲಿಲ್ಲ.

ಕಾಲ್ತುಳಿತ ಪ್ರಕರಣಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ, ಅಲ್ಲದೆ, ಪೋಲಿಸರ ವೈಫಲ್ಯವೂ ಒಂದು ಪ್ರಮುಖ ಕಾರಣ ಎಂದು ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನ ಅಂದಿನ ಪೋಲಿಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ.
ಪ್ರತ್ಯೇಕ ಸಮಾರಂಭ
ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಆರ್‌ಸಿಬಿ ಕ್ರಿಕೆಟ್ ತಂಡಕ್ಕೆ ಸನ್ಮಾನ ಹಾಗೂ ವಿಜಯೋತ್ಸವ ಆಚರಣೆಗೆ ಸರ್ಕಾರ ಹಾಗೂ ಪ್ರಾಯೋಜಕರು ಪ್ರತ್ಯೇಕವಾಗಿ ಸಮಾರಂಭಗಳನ್ನು ಆಯೋಜಿಸಿದ್ದರು.
ವಿಜಯೋತ್ಸವ ಆಚರಣೆ ದಿನವಾದ ಜೂನ್ 4ರಂದು ಸರ್ಕಾರ, ಪ್ರಾಯೋಜಕರು ಮತ್ತು ಪೋಲಿಸರ ನಿರೀಕ್ಷೆಗಿಂತ ಹೆಚ್ಚು ಕ್ರೀಡಾಭಿಮಾನಿಗಳು ಸೇರಿದ್ದರಿಂದ ಜನಸಂದಣಿಯನ್ನು ನಿಯಂತ್ರಿಸಲಾಗದೆ, ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಅಸುನೀಗಿ, 56 ಮಂದಿ ಗಾಯಗೊಂಡರು.

ಭಾರೀ ಮುಜುಗರ
ಈ ಪ್ರಕರಣ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿದ್ದಲ್ಲದೆ, ಇಡೀ ರಾಷ್ಟ್ರದಲ್ಲಿ ಚರ್ಚೆಗೆ ಗ್ರಾಸವಾಗಿ, ತೀವ್ರ ಟೀಕೆಗೆ ಒಳಗಾಯಿತು.
ಇದರಿಂದ ಎಚ್ಚೆತ್ತ ಸರ್ಕಾರ ತಪ್ಪಿತಸ್ತರ ವಿರುದ್ಧ ಕ್ರಮ ಹಾಗೂ ಮುಂದೆ ಇಂತಹ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ಮೂರು ಸಂಸ್ಥೆಗಳಿಗೆ ತನಿಖೆಗೆ ಸೂಚಿಸಿತ್ತು.

